Home ಕರಾವಳಿ ಉಳ್ಳಾಲ ಮಹಿಳೆಗೆ ಕಿರುಕುಳ ಆರೋಪ | ತಪ್ಪಿತಸ್ಥರು ಯಾರಾಗಿದ್ದರೂ ಪೊಲೀಸರು ಕಾನೂನು ಪ್ರಕಾರ ಶಿಕ್ಷಿಸಲಿ |...

ಉಳ್ಳಾಲ ಮಹಿಳೆಗೆ ಕಿರುಕುಳ ಆರೋಪ | ತಪ್ಪಿತಸ್ಥರು ಯಾರಾಗಿದ್ದರೂ ಪೊಲೀಸರು ಕಾನೂನು ಪ್ರಕಾರ ಶಿಕ್ಷಿಸಲಿ | ಎಸ್‌ಡಿಪಿಐ

ಮಂಗಳೂರು: ಉಳ್ಳಾಲದಲ್ಲಿ ಮಹಿಳೆಗೆ ಎಸ್‌ಡಿಪಿಐ ಅಧ್ಯಕ್ಷ ಸಿದ್ದೀಕ್ ಎಂಬಾತ ಕಿರುಕುಳ ನೀಡಿದ್ದಾನೆಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಒಂದು ವೇಳೆ ಆತ ತಪ್ಪಿತಸ್ತನಾಗಿದ್ದರೆ ಪೊಲೀಸ್ ಇಲಾಖೆ ಆತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ಡಿಪಿಐ ಒತ್ತಾಯಿಸಿದೆ.

ಸಿದ್ದೀಕ್ ಎಂಬಾತ ಎಸ್‌ಡಿಪಿಐಯ ಅಧ್ಯಕ್ಷನಲ್ಲ ಆತ ಸಾಮಾನ್ಯ ಕಾರ್ಯಕರ್ತನಾಗಿದ್ದಾನೆ, ಎ.ಆರ್.ಅಬ್ಬಾಸ್ ಎಂಬವರು ಉಳ್ಳಾಲ ನಗರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಘಟನೆಯ ಬಗ್ಗೆ ಪಕ್ಷದ ಆಂತರಿಕ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದ್ದು, ವಾಸ್ತವಾಂಶ ತಿಳಿಯಲು ಆತ ಇದುವರೆಗೂ ತಮ್ಮ ಸಂಪರ್ಕಕ್ಕೆ ಲಭ್ಯವಾಗಿಲ್ಲ, ಒಂದು ವೇಳೆ ಆತ ತಪ್ಪಿತಸ್ಥನಾಗಿದ್ದರೆ ಆತ ನಮ್ಮ ಕಾರ್ಯಕರ್ತ ಎಂದುಕೊಂಡು ಯಾವುದೇ ಕಾರಣಕ್ಕೂ ಆತನನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ, ಹಾಗೂ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ ಎಂದು ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ ಸ್ಪಷ್ಟಪಡಿಸಿದ್ದಾರೆ.

ಅದೇ ರೀತಿ ಪೊಲೀಸ್ ಇಲಾಖೆ ಕೂಡ ಎರಡೂ ಕಡೆಯಿಂದಲೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಹಿಳೆಯರನ್ನು ಬಳಸಿಕೊಂಡು ಹನಿಟ್ರಾಪ್ ಮತ್ತು ಯುವಕರ ಫೋಟೋ ತೆಗೆದು ಬ್ಲಾಕ್ ಮೇಲ್ ನಡೆಸಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ದೃಷ್ಟಿಕೋನವನ್ನು ಇಟ್ಟುಕೊಂಡು ಕೂಡ ಪೊಲೀಸ್ ಇಲಾಖೆ ತನಿಖೆ ನಡೆಸಬೇಕು. ಅಂತಹ ಷಡ್ಯಂತ್ರಕ್ಕೆ ಈತ ಬಲಿಯಾಗಿದ್ದಾನೆಯೇ ಎಂದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಅಬ್ಬಾಸ್ ಕಿನ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version