ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಗುಂಪುಗಳ ವೇದಿಕೆಯಾಗಿರುವ ಮೂವ್ ಮೆಂಟ್ ಅಗೈನ್ಸ್ಟ್ ಯುಎಪಿಎ ಆಂಡ್ ಅದರ್ ರೆಪ್ರೆಸ್ಸಿವ್ ಲಾಸ್(MURL) ವತಿಯಿಂದ ‘ಅಗೈನ್ಸ್ಟ್ ದಿ ವೆರಿ ಐಡಿಯಾ ಆಫ್ ಜಸ್ಟೀಸ್: ಯುಎಪಿಎ ಆ್ಯಂಡ್ ಅದರ್ ಲಾಸ್’ ಪುಸ್ತಕ ಬಿಡುಗಡೆ ಮತ್ತು ದಮನಕಾರಿ ಕಾನೂನುಗಳ ಕುರಿತ ಚರ್ಚೆಯನ್ನು ವೆಬಿನಾರ್ ಮೂಲಕ ಆಯೋಜಿಸಲಾಗಿತ್ತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪಿಯುಸಿಎಲ್ ರಾಜ್ಯಾಧ್ಯಕ್ಷ ವೈ.ಜೆ.ರಾಜೇಂದ್ರ, ಇಡೀ ದೇಶದ ವಿದ್ಯಾಮಾನಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಸಾಕ್ಷ್ಯಾಧಾರಗಳ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.
ಈ ಪುಸ್ತಕದಲ್ಲಿ 8 ಕರಾಳ ಕಾನೂನುಗಳನ್ನು ಪಟ್ಟಿ ಮಾಡಿ ಅದನ್ನು ವಿಶ್ಲೇಷಿಸಲಾಗಿದೆ. ಈ ಕಾನೂನುಗಳು ಮಾನವ ಹಕ್ಕು, ಸಾಮಾಜಿಕ ನ್ಯಾಯ ಮತ್ತು ಅಂತಾರಾಷ್ಟ್ರೀಯ ಘೋಷಣೆಗಳಿಗೆ ವಿರುದ್ಧವಾಗಿದೆ ಎಂಬುದನ್ನು ಪುಸ್ತಕ ಬಹಳ ಸ್ಪಷ್ಟಪಡಿಸುತ್ತದೆ. ಪ್ರಮುಖವಾಗಿ ಈ ಪುಸ್ತಕವು ಜನ ಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಪ್ರಕಟಿಸಲಾಗಿದೆ. ಅದೇ ರೀತಿ ನ್ಯಾಯವಾದಿಗಳು, ನ್ಯಾಯಮೂರ್ತಿಗಳೂ ಈ ಪುಸ್ತಕವನ್ನು ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ವೈ.ಜೆ.ರಾಜೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಸಿ.ಎಚ್.ಆರ್.ಓ. ರಾಜ್ಯಾಧ್ಯಕ್ಷ ಅಡ್ವೊಕೇಟ್ ಎಸ್.ಬಾಲನ್, ಈ ಅಪಾಯಕಾರಿ ಕಾಯ್ದೆಯಡಿಯಲ್ಲಿ 5,922 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವುಗಳ ವಿಚಾರಣೆಗೆ ಹಲವಾರು ವರ್ಷಗಳೇ ಹಿಡಿಯುತ್ತಿವೆ. ನಾಸಿರ್ ಮದನಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ಆತ 11 ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಭೀಮಾ ಕೋರೇಗಾಂವ್ ಘಟನೆಗೂ ಆ ಪ್ರಕರಣದಲ್ಲಿ ಬಂಧಿತರಾದ ಬುದ್ಧಿಜೀವಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಕಠಿಣ ಕಾನೂನುಗಳ ಕಾರಣಕ್ಕಾಗಿ ಅವರನ್ನು ಜೈಲಿನಲ್ಲಿಡಲಾಗಿದೆ. ಸಿಎಎ ವಿರೋಧಿ ಹೋರಾಟಗಾರರು, ರೈತ ಹೋರಾಟಗಾರರು ಮತ್ತು ಕಾರ್ಮಿಕ ವಿರೋಧಿ ಕಾನೂನುಗಳ ಬಗ್ಗೆ ಧ್ವನಿ ಎತ್ತಿದವರ ವಿರುದ್ಧ ಯುಎಪಿಎಯನ್ನು ಹೇರಲಾಗುತ್ತಿದೆ. ಹೀಗೆ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧದ ಅಸಹಮತಿಯ ಧ್ವನಿಗಳನ್ನು ನಿಗ್ರಹಿಸಲು ಇಂತಹ ಕಾನೂನುಗಳನ್ನು ಬಳಸಲಾಗುತ್ತಿದೆ ಎಂದು ವಿವರಿಸಿದರು.
ಮಾನವ ಹಕ್ಕುಗಳ ಕಾರ್ಯಕರ್ತ ಡಾ.ವಿ.ಲಕ್ಷ್ಮೀ ನಾರಾಯಣ ಮೈಸೂರು, ಪೀಪಲ್ಸ್ ಡೆಮಾಕ್ರಟಿಕ್ ಫಾರಂ ಡಾ.ವಿ.ಎಸ್.ಶ್ರೀಧರ, ದಾವಣಗೆರೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ನ್ಯಾ.ಅನೀಸ್ ಪಾಶ ಈ ಸಂದರ್ಭದಲ್ಲಿ ಮಾತನಾಡಿದರು.
ಎಂ.ಯು.ಆರ್.ಎಲ್.ನ ರಾಜ್ಯ ಸಂಚಾಲಕ ಹಾಗೂ ಎನ್.ಸಿ.ಎಚ್.ಆರ್.ಒ. ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಉಮರ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು.