Home ಟಾಪ್ ಸುದ್ದಿಗಳು ಸಂಸದ ತೇಜಸ್ವಿ ಸೂರ್ಯ ಮತ್ತು ತಂಡದ ಬಂಧನಕ್ಕೆ ಡಿ.ಕೆ.ಶಿವಕುಮಾರ್ ಆಗ್ರಹ

ಸಂಸದ ತೇಜಸ್ವಿ ಸೂರ್ಯ ಮತ್ತು ತಂಡದ ಬಂಧನಕ್ಕೆ ಡಿ.ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮು ಬಣ್ಣ ಬಳಿದಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಮೂವರು ಶಾಸಕರ ಟೀಂ ನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೋವಿಡ್ ವಾರ್ ರೂಂ ಗೆ ಹೋಗಿ ಬೆಡ್ ಬ್ಲಾಕಿಂಗ್ ಹಗರಣ ಬಯಲಿಗೆಳೆದ ತೇಜಸ್ವಿ ಸೂರ್ಯ ಕೇವಲ ಮುಸ್ಲಿಂ ಹೆಸರನ್ನು ಮಾತ್ರ ಓದಿ ಹೇಳುವ ಮೂಲಕ ಪ್ರಕರಣಕ್ಕೆ ಕೋಮು ವಿಷ ಬಿಜ ಬಿತ್ತಿದ್ದಾರೆ. ವಾರ್ ರೂಂ ನಲ್ಲಿ ಮುಸ್ಲಿಂ ಸಮುದಾಯದವರು ಬಿಟ್ಟರೆ ಬೇರೆ ಯಾರೂ ಇರಲಿಲ್ಲವೇ? ಮೊದಲು ತೇಜಸ್ವಿ ಸೂರ್ಯ ಹಾಗೂ ಅವರ ಟೀಂ ನ್ನು ಬಂಧಿಸಬೇಕು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಅಟ್ಟಹಾಸದಿಂದ ಪರಿಸ್ಥಿತಿ ಕೈಮೀರಿ ಹೋಗಿದೆ. ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋದ ಸೋಂಕಿತರು ವಾಪಸ್ ಬರುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಹೋದವರು ವಾಪಸ್ ಬರುತ್ತಿಲ್ಲ. ಸಿಎಂ 3 ದಿನಗಳಲ್ಲಿ ಕೊರೊನಾದಿಂದ ಮುಕ್ತರಾಗಿ ಬಂದಿದ್ದಾರೆ. ನಾನು ಕೂಡ ಕೊರೊನಾದಿಂದ ಮುಕ್ತನಾಗಿ ಬಂದಿದ್ದೇನೆ. ಆದರೆ ಸರ್ಕಾರಿ ಆಸ್ಪತ್ರೆಗೆ ದಾಖಲಾದವರು ಸತ್ತೇ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಯಡಿಯೂರಪ್ಪನವರು ಮೊದಲು ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗಳನ್ನು ಕರೆದು ಮಾತನಾಡಬೇಕು. ಜನರ ಪ್ರಾಣ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ

.

ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯನ್ನು ಸಂದೀಪ್ ಪಾಟೀಲ್ ಅವರಿಗೆ ಒಪ್ಪಿಸಲಾಗಿದೆ. ನಮಗೆ ಸಂದೀಪ್ ಪಾಟೀಲ್ ಸೇರಿದಂತೆ ಯಾರ ಮೇಲೂ ನಂಬಿಕೆಯಿಲ್ಲ. ಮುಖರ್ಜಿ ಮೇಲೂ ನಂಬಿಕೆಯಿಲ್ಲ, ಅನುಚೇತ್ ಮೇಲೂ ಇಲ್ಲ. ಈಗಾಗಲೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ನಡೆದು ಪ್ರಕರಣ ದಾಖಲಾಗಿ ಒಂದುವರೆ ತಿಂಗಳಾಯಿತು. ಏನು ಮಾಡಿದರು? ಪ್ರಕರಣವನ್ನೆ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಹೀಗಿರುವಾಗ ಬೆಡ್ ಬ್ಲಾಕಿಂಗ್ ಹಗರಣ ಎಷ್ಟರ ಮಟ್ಟಿಗೆ ಸತ್ಯಾಸತ್ಯತೆ ಹೊರಬರಲಿದೆ? ಬಿಜೆಪಿ ಸರ್ಕಾರದ ಮುಖ್ಯ ಅಜೆಂಡಾವೇ ಗುಳುಂ ಮಾಡುವುದು. ಎಲ್ಲವನ್ನೂ ಗುಳುಂ ಮಾಡುವುದೇ ಅವರ ಕೆಲಸ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

Join Whatsapp
Exit mobile version