Home ರಾಷ್ಟ್ರೀಯ ವಿವಾದಿತ ಸ್ವಾಮೀಜಿ ನಿತ್ಯಾನಂದನಿಂದ ‘ರಿಝರ್ವ್ ಬ್ಯಾಂಕ್ ಆಫ್ ಕೈಲಾಸ’ ಲೋಕಾರ್ಪಣೆ

ವಿವಾದಿತ ಸ್ವಾಮೀಜಿ ನಿತ್ಯಾನಂದನಿಂದ ‘ರಿಝರ್ವ್ ಬ್ಯಾಂಕ್ ಆಫ್ ಕೈಲಾಸ’ ಲೋಕಾರ್ಪಣೆ

ನವದೆಹಲಿ : ಇಡೀ ಜಗತ್ತು ಕೊರೋನ ಸೋಂಕಿನ ಬಿಕ್ಕಟ್ಟಿನಿಂದ ಬಳಲುತ್ತಿದೆ. ಭಾರತದಲ್ಲಿ ಹಬ್ಬವಿದ್ದರೂ, ಜನತೆಯಲ್ಲಿ ಹಬ್ಬದ ವಾತಾವರಣ ಇಲ್ಲ. ಆದರೆ ಈ ನಡುವೆ, ಇಂದು ವಿವಾದಿತ ದೇವಮಾನವ, ಅತ್ಯಾಚಾರ ಆರೋಪಕ್ಕಾಗಿ ತಲೆ ಮರೆಸಿಕೊಂಡಿರುವ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ನ ಕರಾವಳಿಯಲ್ಲಿ ಸ್ಥಾಪಿಸಿರುವ ತನ್ನ ಸ್ವಂತ ‘ದೇಶ’ದ ರಿಝರ್ವ್ ಬ್ಯಾಂಕ್ ಲೋಕಾರ್ಪಣೆ ಮಾಡಿದ್ದಾನೆ. ‘ರಿಝರ್ವ್ ಬ್ಯಾಂಕ್ ಆಫ್ ಕೈಲಾಸ’ ಸ್ಥಾಪಿಸಿರುವ ಬಗ್ಗೆ ನಿತ್ಯಾನಂದ ತನ್ನ ‘ದೇಶ’ ‘ಕೈಲಾಸ’ಕ್ಕೆ ಸಂಬಂಧಿಸಿದ ಪ್ರಕಟನೆಯಲ್ಲಿ ತಿಳಿಸಿದ್ದಾನೆ.

ಕೈಲಾಸ ದೇಶವನ್ನು ಸ್ಥಾಪಿಸಿರುವುದಾಗಿ ನಿತ್ಯಾನಂದ ಕಳೆದ ನವೆಂಬರ್ ನಲ್ಲಿ ಘೋಷಿಸಿದ್ದ ಮತ್ತು ತಾನು ಅದರ ಪ್ರಧಾನಿ ಎಂದೂ ಹೇಳಿದ್ದ. ಕೈಲಾಸ ನಿಜವಾಗಿಯೂ ಎಲ್ಲಿದೆ ಗೊತ್ತಿಲ್ಲ. ಆದರೆ, ಮಾಧ್ಯಮ ವರದಿಗಳ ಪ್ರಕಾರ, ಅದು ಈಕ್ವೆಡಾರ್ ನ ಕರಾವಳಿ ತೀರದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ, ತಮ್ಮ ದೇಶದ ಯಾವುದೇ ದ್ವೀಪವನ್ನು ನಿತ್ಯಾನಂದ ಖರೀದಿಸಿಲ್ಲ ಎಂದು ಈಕ್ವೆಡಾರ್ ಸ್ಪಷ್ಟಪಡಿಸಿದೆ.

ತಮ್ಮದೇ ದೇಶದಲ್ಲಿ ಹಿಂದೂತ್ವವನ್ನು ಆಚರಿಸುವ ಹಕ್ಕು ಕಳೆದುಕೊಂಡಿರುವ ಜನರಿಂದ ಕೈಲಾಸ ಸ್ಥಾಪನೆಯಾಗಿದೆ ಎಂದು ನಿತ್ಯಾನಂದ ಪ್ರತಿಪಾದಿಸಿದ್ದಾನೆ. ಗಣೇಶ ಚೌತಿಯ ಪುಣ್ಯ ದಿನದಂದು ರಿಝರ್ವ್ ಬ್ಯಾಂಕ್ ಆಫ್ ಕೈಲಾಸ ಸ್ಥಾಪಿಸಿದುದಾಗಿ ನಿತ್ಯಾನಂದ ತನ್ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿಯೂ ಪ್ರಕಟಿಸಿದ್ದಾನೆ. ಈ ಕುರಿತ ಫೋಟೊಗಳನ್ನೂ ಹಂಚಿಕೊಂಡಿದ್ದಾನೆ.

Join Whatsapp
Exit mobile version