ಆರು ಎಸೆತದಲ್ಲಿ ಆರು ಸಿಕ್ಸರ್‌ ! ಯುವರಾಜ್‌ ಸಿಂಗ್‌ ದಾಖಲೆಗೆ 15 ವರ್ಷ

Prasthutha|

ನವದೆಹಲಿ: ಸೆಪ್ಟಂಬರ್‌ 19, 2007 ಕ್ರಿಕಟ್‌ನಲ್ಲಿ ಹೊಸ ಚರಿತ್ರೆ ದಾಖಲಾದ ಅವಿಸ್ಮರಣೀಯ ದಿನ. ಚೊಚ್ಚಲ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಡರ್‌ ಯುವರಾಜ್‌ ಸಿಂಗ್‌, ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ, ಒಂದೇ ಓವರ್‌ನ ಆರೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಸುದಿನ.

- Advertisement -

ಡರ್ಬನ್‌ನಲ್ಲಿ ನಡೆದಿದ್ದ ಚೊಚ್ಚಲ ಟಿ20 ವಿಶ್ವಕಪ್‌ನ 21ನೇ ಪಂದ್ಯದಲ್ಲಿ ಇಂಡಿಯಾ- ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ, 17 ಓವರ್‌ ಕಳೆಯುವಷ್ಟರಲ್ಲಿ 3 ವಿಕೆಟ್‌ ನಷ್ಟದಲ್ಲಿ 159 ರನ್‌ ಗಳಿಸಿತ್ತು. ಕೇವಲ 2 ಎಸೆತಗಳನ್ನು ಎದುರಿಸಿದ್ದ ಯುವರಾಜ್‌ ಸಿಂಗ್‌ ಮತ್ತು 4 ಎಸೆತಗಳಲ್ಲಿ 5 ರನ್‌ ಗಳಿಸಿದ್ದ ಧೋನಿ ಕ್ರೀಸ್‌ನಲ್ಲಿದ್ದರು.

ಆಂಡ್ರೋ ಪ್ಲಿಂಟಾಫ್‌ ಎಸೆದ 18ನೇ ಓವರ್‌ನ 4 ಮತ್ತು 5ನೇ ಎಸೆತವನ್ನು ಯುವರಾಜ್‌ ಬೌಂಡರಿಗೆ ಅಟ್ಟಿದ್ದರು. ಈ ವೇಳೆ ಪ್ಲಿಂಟಾಫ್‌ ಮತ್ತು ಯುವಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರುತ್ತಲೇ ಮಧ್ಯ ಪ್ರವೇಶಿಸಿದ ನಾಯಕ ಧೋನಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

- Advertisement -

ಆದರೆ ಪ್ಲಿಂಟಾಫ್‌ ಮೇಲಿನ ಕೋಪವನ್ನೆಲ್ಲಾ ಯುವರಾಜ್‌ ತೀರಿಸಿದ್ದು 19ನೇ ಓವರ್‌ ಎಸೆಯಲು ಬಂದ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಮೇಲೆ. ಬ್ರಾಡ್‌ ಎಸೆದ ಆರು ಎಸೆತಗಳನ್ನು ಸ್ಟ್ರೈಕ್‌ನಲ್ಲಿದ್ದು ಎದುರಿಸಿದ್ದ ಯುವಿ, ಆರೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ದರು. ಆ ಮೂಲಕ ಬ್ರಾಡ್‌ ತಮ್ಮ ಒಂದೇ ಓವರ್‌ನಲ್ಲಿ 36 ರನ್‌ ಬಿಟ್ಟುಕೊಟ್ಟು ಮುಖಭಂಗಕ್ಕೀಡಾಗಿದ್ದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ 6 ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸಿದ್ದು ಅದೇ ಮೊದಲ ಬಾರಿಯಾಗಿತ್ತು. ಇದರ ಜೊತೆಗೆ ಈ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಯುವರಾಜ್, ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನೂ ಬರೆದಿದ್ದರು. ವಿಶೇಷವೆಂದರೆ ಇಂದಿಗೂ ಈ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. 16 ಎಸೆತಗಳಲ್ಲಿ 58 ರನ್ ಗಳಿಸಿದ್ದ ಯುವಿ, ಪ್ಲಿಂಟಾಫ್‌ ಎಸೆದ ಅಂತಿಮ ಓವರ್‌ನ 5ನೇ ಎಸೆತದಲ್ಲಿ ಕಾಲಿಂಗ್‌ವುಡ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.

ಯುವರಾಜ್ ಸಿಂಗ್‌ಗಿಂತ ಮೊದಲು ದಕ್ಷಿಣ ಆಫ್ರಿಕದ ಹರ್ಷಲ್ ಗಿಬ್ಸ್ 2007ರಲ್ಲಿ ಏಕದಿನ ಪಂದ್ಯದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸುವ ಮೂಲಕ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊತ್ತ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.

ಯುವರಾಜ್‌ ಸಿಂಗ್‌ ಅಮೋಘ ಸಾಧನೆಗೆ ಇಂದಿಗೆ 15 ವರ್ಷ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ, ಯುವರಾಜ್ ಮತ್ತೊಮ್ಮೆ ತಮ್ಮ ಅಬ್ಬರದ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಯುವಿ, ಮಗು ಓರಿಯನ್ ಕೀಚ್ ಸಿಂಗ್‌ನನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡು, 15 ವರ್ಷಗಳ ಹಿಂದಿನ ತಮ್ಮ  ದಾಖಲೆಯ ಇನ್ನಿಂಗ್ಸ್ ಅನ್ನು ವೀಕ್ಷಿಸುತ್ತಾ ಸಂಭ್ರಮಿಸುವುದನ್ನು ಕಾಣಬಹುದಾಗಿದೆ.

“15 ವರ್ಷಗಳ ನಂತರ ಈ ಇನ್ನಿಂಗ್ಸ್ ವೀಕ್ಷಿಸಲು ನನಗೆ ಇವನಿಗಿಂತ ಉತ್ತಮ ಜೊತೆಗಾರ ಸಿಗಲಿಲ್ಲ” ಎಂದು ಯುವಿ ವಿಡಿಯೋದ ಶೀರ್ಷಿಕೆಯಲ್ಲಿ ಬರೆದಿದ್ದಾರೆ.



Join Whatsapp