Home ಟಾಪ್ ಸುದ್ದಿಗಳು ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮೇಲುಗೈ

ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮೇಲುಗೈ

ಹೈದರಾಬಾದ್: ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಪ್ರಚಂಡ ಗೆಲುವು ಸಾಧಿಸಿದೆ. ಭಾನುವಾರ ಫಲಿತಾಂಶ ಪ್ರಕಟವಾಗಿದ್ದು, ಫಲಿತಾಂಶದ ಕೊನೆಯ ವರದಿಗಳು ಬಂದಂತೆ ಪಕ್ಷವು ಸುಮಾರು ಶೇ.90 ಮಂಡಲ ಪರಿಷತ್ ಪ್ರಾದೇಶಿಕ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಅಲ್ಲದೆ, ಜಿಲ್ಲಾ ಪರಿಷತ್ ಪ್ರಾದೇಶಿಕ ಕ್ಷೇತ್ರಗಳಲ್ಲಿ ಗೆಲುವಿನ ಪ್ರಮಾಣ ಶೇ.99 ಆಗಿದೆ.

ಏಪ್ರಿಲ್ 8 ರಂದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು.. ಫಲಿತಾಂಶಗಳನ್ನ ಏಪ್ರಿಲ್ 10 ರಂದು ಘೋಷಿಸಲು ನಿರ್ಧರಿಸಲಾಗಿತ್ತು. ಆದರೆ ವೈಎಸ್ಸಾರ್ ಪಕ್ಷ ಮಾದರಿ ನೀತಿ ಸಂಹಿತೆ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ತೆಲುಗು ದೇಶಂ ಪಕ್ಷ ಮತ್ತು ಬಿಜೆಪಿ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದಾಗಿ ಮತ ಎಣಿಕೆಯನ್ನು ಕೋರ್ಟ್ ತಡೆಹಿಡಿದಿತ್ತು.

ಕಳೆದ ಗುರುವಾರ, ಹೈಕೋರ್ಟ್‌ನ ವಿಭಾಗೀಯ ಪೀಠವು ಅಂತಿಮವಾಗಿ ಭಾನುವಾರ ಮತ ಎಣಿಕೆಗೆ ಅನುಮತಿ ನೀಡಿತು. ಭಾನುವಾರ ಸಂಜೆ 7.30ಕ್ಕೆ ಬಂದ ಅಂತಿಮ ಫಲಿತಾಂಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪ್ರಚಂಡ ಜಯ ದಾಖಲಿಸಿದೆ. ZPTCಯ 553 ರಲ್ಲಿ 547 ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದೆ. MPTCಯ 8,083 ಕ್ಷೇತ್ರಗಳ ಪೈಕಿ 7,284 ಕ್ಷೇತ್ರಗಳಲ್ಲಿ ವಿಜಯಿಯಾಗಿದೆ.

ದಶಕದ ಹಿಂದೆಯಷ್ಟೇ, ಸ್ಥಾಪನೆಯಾದ ವೈಎಸ್ಸಾರ್ ಕಾಂಗ್ರೆಸ್ ಪಕ್ಷ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 175 ವಿಧಾನಸಭಾ ಸ್ಥಾನಗಳ ಪೈಕಿ 151 ಸ್ಥಾನಗಳಲ್ಲಿ ವಿಜಯಿಯಾಗಿತ್ತು. 25 ಲೋಕಸಭಾ ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನೂ ತನ್ನದಾಗಿಸಿತ್ತು. ರಾಜ್ಯದ 75 ಪುರಸಭೆಗಳು ಮತ್ತು 74 ನಗರ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿದೆ. ಅಲ್ಲದೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ 12 ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನೂ ಜಯಿಸಿಕೊಂಡಿದೆ.

ತಂದೆಯ ಜನಪ್ರಿಯತೆ ಉಳಿಸಿಕೊಂಡ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಈ ಗೆಲುವು ಆಂಧ್ರ ಪ್ರದೇಶದಾದ್ಯಂತ ಸಂಭ್ರಮದ ವಾತಾವರಣ ಮೂಡಿಸಿದೆ. ಮಹಿಳೆಯರು, ಹಿಂದುಳಿದ ಸಮುದಾಯಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಗನ್ಮೋಹನ್ ರೆಡ್ಡಿ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಯೋಜನೆಗಳು ಮತ್ತು ಜಗಮೋಹನ್ ರೆಡ್ಡಿಯವರ ಜನಪ್ರಿಯತೆಯು ಈ ಗೆಲವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ..

Join Whatsapp
Exit mobile version