ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕರಿಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಆನೇಕಲ್ ನಗರದ ಅತ್ತಿಬೆಲೆಯ ಅರೆಹಳ್ಳಿ ಸಮೀಪದ ಟಿವಿಎಸ್ ರಸ್ತೆಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಕೃತ್ಯ ನಡೆದಿದ್ದು, ಇಂದು ಮುಂಜಾನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಕೊಲೆಗೀಡಾದವರನ್ನು ಅತ್ತಿಬೆಲೆಯ ದೀಪಕ್ ಹಾಗೂ ಮಾಯಸಂದ್ರದ ಭಾಸ್ಕರ್ ಎಂದು ಗುರುತಿಸಲಾಗಿದೆ.
ಈ ಯುವಕರಿಬ್ಬರೂ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ಅವರ ಮೇಲೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಅಣತಿ ದೂರದಲ್ಲಿಯೇ ಅವರ ಬೈಕ್ ನೆಲಕ್ಕೆ ಬಿದ್ದಿರುವುದು ಪತ್ತೆಯಾಗಿದೆ. ಮಾರಕಾಸ್ತ್ರದಿಂದ ದಾಳಿ ನಡೆಸಿದ ಬಳಿಕ ಯುವಕರಿಬ್ಬರನ್ನು ರಸ್ತೆಯಿಂದ ಪಕ್ಕದ ಗುಡ್ಡ ಪ್ರದೇಶಕ್ಕೆ ಸರಿಸಿ ಬಳಿಕ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವುದು ಕಂಡು ಬಂದಿದೆ. ಘಟನಾ ಸ್ಥಳದಲ್ಲಿ ಸಾಯುವ ಮುನ್ನ ಸಂತ್ರಸ್ತರಿಬ್ಬರೂ ಸಾಕಷ್ಟು ಹೊರಳಾಡಿರುವುದು ಗೊತ್ತಾಗಿದೆ.
ಆದರೆ ಕೊಲೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಅವರು ಕೊಲೆಗಾರರ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.