Home ಟಾಪ್ ಸುದ್ದಿಗಳು ಯುವಕನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿ ಹತ್ಯೆಗೈದು ಶವ ಮೋರಿಗೆ ಎಸೆದ ದುಷ್ಕರ್ಮಿಗಳು

ಯುವಕನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿ ಹತ್ಯೆಗೈದು ಶವ ಮೋರಿಗೆ ಎಸೆದ ದುಷ್ಕರ್ಮಿಗಳು

ಬೆಂಗಳೂರು: ಮೋರಿಯಲ್ಲಿ ಪತ್ತೆಯಾದ ಕೊಳೆತ ಮೃತದೇಹ ಪ್ರಕರಣದ ಬೆನ್ನತ್ತಿದ ರಾಮಮೂರ್ತಿ ನಗರ ಪೊಲೀಸರು ಒಂದು ವಾರಗಳ ಕಾಲ ಚಿತ್ರಹಿಂಸೆ ನೀಡಿ ಯುವಕನೊಬ್ಬನನ್ನು ಕೊಲೆಗೈದಿರುವುದನ್ನು ಪತ್ತೆಹಚ್ಚಿದ್ದಾರೆ.


ಯುವಕನನ್ನು ಕೊಂದು ಆರೋಪಿಯೊಬ್ಬ ಮೃತನ ತಾಯಿಯ ಜೊತೆ ಹುಡುಕಾಟ ನಡೆಸಿದ್ದ ರಹಸ್ಯವನ್ನು ಭೇದಿಸಿರುವ ಪೂರ್ವ ವಿಭಾಗದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.


ಸೈಫುಲ್ಲಾ (35) ಕೊಲೆಯಾದ ಯುವಕ. ಕೆಜಿ ಹಳ್ಳಿ ಹಾಗೂ ರಾಮಮೂರ್ತಿ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪ್ರಶಾಂತ್, ಜಬಿ, ಬಬನ್ ಅಲಿಯಾಸ್ ಶಾಬಾಝ್ ಎಂಬವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಆತನನ್ನು ಒಂದು ವಾರ ರೂಂನಲ್ಲಿ ಕೂಡಿಟ್ಟು ಹಲ್ಲೆ ಮಾಡಿ ನೀಡಿದ ಚಿತ್ರಹಿಂಸೆ ತಾಳದೇ ಮೃತಪಟ್ಟಿದ್ದಾನೆ. ಬಳಿಕ ಹಂತಕರು ಮೃತದೇಹವನ್ನು ಮೋರಿಗೆ ಎಸೆದು ತಮಗೇನು ಗೊತ್ತೇ ಇಲ್ಲ ಎನ್ನುವಂತೆ ಸುಮ್ಮನಾಗಿದ್ದಾರೆ.
ಹಲ್ಲೆಯ ದೃಶ್ಯ ಮೊಬೈಲ್’ನಲ್ಲಿ ಸೆರೆ ಹಿಡಿದು ವಿಕೃತಿ ಮೆರೆಯಲಾಗಿದೆ. ಕಳೆದ ಮಾ. 4ಕ್ಕೆ ರಾಮಮೂರ್ತಿನಗರ ಸಾದಹಳ್ಳಿ ಬ್ರಿಡ್ಜ್ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ಫೋಟೋವನ್ನು ರಾಜ್ಯದ ಎಲ್ಲಾ ಠಾಣೆಗೆ ಕಳುಹಿಸಿ ಪೊಲೀಸರು ತನಿಖೆಗೆ ಇಳಿದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಮರಣೋತ್ತರ ಪರೀಕ್ಷಾ ವರದಿಯಲ್ಲೂ ಯಾವುದೇ ಗಾಯದ ಕುರುಹು ಸಿಗಲಿಲ್ಲ. ಇದನ್ನ ಅಸಹಜ ಸಾವು ಎಂದೇ ಪರಿಗಣಿಸಲಾಗಿತ್ತು.


ರಾಮಮೂರ್ತಿ ನಗರ ಪೊಲೀಸರು ಐಪಿಸಿ 174c ಅಡಿಯಲ್ಲಿ ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೂ ಮೃತನ ಸುಳಿವು ಮಾತ್ರ ಸಿಗಲೇ ಇಲ್ಲ.
ಮಾರ್ಚ್ 6 ಕ್ಕೆ ಮಹಿಳೆಯೊಬ್ಬರು ತನ್ನ ಮಗ ಕಾಣೆಯಾಗಿದ್ದಾನೆಂದು ಕೆಜಿ ಹಳ್ಳಿ ಠಾಣೆಗೆ ದೂರು ನೀಡಿದ್ದರು. ಕೆಜಿ ಹಳ್ಳಿಯ ಮುಸ್ಲಿಂ ಕಾಲೋನಿ ನಿವಾಸಿ ಮಹಿಳೆಗೆ ರಾಮಮೂರ್ತಿ ನಗರದಲ್ಲಿ ಸಿಕ್ಕ ಮೃತದೇಹ ತೋರಿಸಿದಾಗ ನನ್ನ ಮಗನೇ ಆಕೆ ಗುರುತಿಸಿದ್ದು ಮೃತ ವ್ಯಕ್ತಿ ಯಾರೆಂದು ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೆಲ ತಿಂಗಳ ಕಳ್ಳತನ ಮಾಡಿದ್ದ ಎಂದು ಮಗನನ್ನು ಕೆಲವರು ಕೂಡಿ ಹಾಕಿ ನಂತರ ಬಿಟ್ಟು ಕಳುಹಿಸಿರುವ ಮಾಹಿತಿಯನ್ನು ಆಕೆ ನೀಡಿದ್ದು ಇದೇ ಅನುಮಾನದ ಮೇಲೆ ಪ್ರಶಾಂತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಮೊಬೈಲ್ ಪರಿಶೀಲನೆ ಮೃತನನ್ನು ಕಟ್ಟಿ ಹಾಕಿ ಹಲ್ಲೆ ಮಾಡಿ ಹಿಂಸಿಸಿದ ವಿಡಿಯೋ ಸಿಕ್ಕಿದೆ. ಪ್ರಶಾಂತ್ ಮಾಹಿತಿ ಮೇರೆಗೆ ಜಬಿ, ಬಬನ್ ಅಲಿಯಾಸ್ ಶಾಬಾಝ್’ನನ್ನು ಬಂಧಿಸಲಾಗಿದೆ. ಆರೋಪಿ ಜಬಿ ಮೃತನ ತಾಯಿ ಜೊತೆಗೆ ಸೇರಿ ತಾನೂ ವ್ಯಕ್ತಿಯನ್ನು ಹುಡುಕುವ ನಾಟಕ ಮಾಡಿದ್ದ.


ಕೊಲೆ ಏಕೆ:
ಪ್ರಶಾಂತ್ ಕೆಜಿ ಹಳ್ಳಿಯಲ್ಲಿ ಗುಜರಿ (ಸ್ಕ್ರಾಪ್) ಅಂಗಡಿ ಇಟ್ಟುಕೊಂಡಿದ್ದು, ಅಂಗಡಿಯಿಂದ ವಸ್ತುಗಳು ಆಗಾಗ ಕಳ್ಳತನವಾಗುತ್ತಿದ್ದು ಪ್ರಶಾಂತ್ ಕಳ್ಳನನ್ನು ಹಿಡಿಯಲು ರಾತ್ರಿ ಅಡಗಿ ಕುಳಿತಿದ್ದ. ಈ ವೇಳೆ ಪ್ರಶಾಂತ್ ಅಂಗಡಿಗೆ ಮೃತ ಸೈಫುಲ್ಲಾ ಬಂದಿದ್ದಾನೆ. ಆಗ ಪ್ರಶಾಂತ್ ಮತ್ತವರ ಗೆಳೆಯರು ಸೈಫುಲ್ಲಾನನ್ನು ಹಿಡಿದುಕೊಂಡಿದ್ದಾರೆ. ಕಟ್ಟಡ ಮಾಲೀಕ ಜಬಿಗೆ ಪ್ರಶಾಂತ್ ಕಳ್ಳತನ ವಿಚಾರ ಮುಟ್ಟಿಸಿದ್ದಾನೆ.
ತನ್ನ ಪಟಾಲಂನ ಜೊತೆಗೆ ಆಗಮಿಸಿದ್ದ ಜಬಿ, ಸೈಫುಲ್ಲಾನನ್ನು ರೂಂ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಒಂದು ವಾರ ಒಂದೇ ಕೊಠಡಿಯಲ್ಲಿ ಇಟ್ಟು ಹಲ್ಲೆ ಮಾಡಿದ್ದಾರೆ. ರಕ್ತಸಿಕ್ತವಾಗಿ ಬಿದ್ದು ಬೇಡಿಕೊಂಡರೂ ಆರೋಪಿಗಳು ಬಿಟ್ಟಿಲ್ಲ. ಊಟ ತಿಂಡಿ ಏನನ್ನು ನೀಡದೇ ಪ್ರತಿದಿನ ಹಲ್ಲೆ ಮಾಡಿದ್ದಾರೆ. ಒಂದು ವಾರದ ಬಳಿಕ ರೂಮ್ ನಲ್ಲಿಯೇ ಸೈಫುಲ್ಲಾ ಮೃತಪಟ್ಟಿದ್ದಾನೆ.
ಮೃತದೇಹವನ್ನು ಸಾದಹಳ್ಳಿ ಚರಂಡಿಗೆ ಎಸೆದಿದ್ದು ಮೂರ್ನಾಲ್ಕು ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

Join Whatsapp
Exit mobile version