Home ಟಾಪ್ ಸುದ್ದಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಬೆಂಗಳೂರು: ಲಕ್ಷಗಟ್ಟಲೆ ಪಡೆದ ಸಾಲ ವಾಪಸ್ ಕೊಡದ ವಿಚಾರದ ಹಿನ್ನೆಲೆಯಲ್ಲಿ ನಡೆದ ಗಲಾಟೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಜಾಹೀರಾತು ಪ್ರಿಂಟಿಂಗ್ ಏಜೆನ್ಸಿ ಮಾಲೀಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೋಲ್ ಬಂಕ್ ಹಿಂಭಾಗ ನಿನ್ನೆ ಮಧ್ಯರಾತ್ರಿ ನಡೆದಿದೆ.

ಚಂದ್ರ ಲೇಔಟ್’ನ ಮೊದಲ ಹಂತದ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ಲಿಯಾಖತ್ ಅಲಿಖಾನ್ (44) ಕೊಲೆಯಾದವರು ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ಮನೆಯಿಂದ ರಾತ್ರಿ 8ರ ವೇಳೆ ಜಿಮ್‌’ಗೆ ಹೋಗಿ ನಾಪತ್ತೆಯಾಗಿದ್ದ ಲಿಯಾಖತ್ ಅಲಿಖಾನ್ ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೋಲ್ ಬಂಕ್ ಬಳಿಯ ಮನೆಯಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾರೆ.

ಈ‌ ಸಂಬಂಧಿಸಿದಂತೆ ಲಿಯಾಖತ್ ಅಲಿಖಾನ್ ಅವರ ಪುತ್ರ ಅರ್ಮಾನ್ ಅಲಿಖಾನ್ ಚಂದ್ರ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು ಸ್ವಂತ ಮನೆಯಲ್ಲಿ ನನ್ನ ತಂದೆ ಲಿಯಾಖತ್ ಅಲಿಖಾನ್ ತಾಯಿ ಶಬಾನ ಖಾನಂ, ಅಕ್ಕ ದೀನಾಜ್ ಖಾನಂ ವಾಸವಾಗಿದ್ದು, ನಾನು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ನಮ್ಮ ತಾಯಿ ಗೃಹಿಣಿಯಾಗಿದ್ದರೆ, ನನ್ನ ಅಕ್ಕ 2ನೇ ವರ್ಷದ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ತಂದೆ ಲಿಯಾಖತ್ ಅಲಿ ಖಾನ್  ಸುಮಾರು 20 ವರ್ಷಗಳಿಂದ ಗಂಗೊಂಡನಹಳ್ಳಿಯಲ್ಲಿ ರಾಯಲ್ ಕಮ್ಯುನಿಕೇಷನ್ ಎನ್ನುವ ಜಾಹೀರಾತು ಪ್ರಿಂಟಿಂಗ್ ಏಜೆನ್ಸಿ ವ್ಯವಹಾರ ನಡೆಸುತ್ತಿದ್ದು, ಅವರು ಪ್ರತಿದಿನ ರಾತ್ರಿ 8 ಗಂಟೆಗೆ ನಾಗರಭಾವಿಯಲ್ಲಿರುವ ಜಿಮ್’ಗೆ ಹೋಗಿ ಬಳಿಕ ಗಂಗೊಂಡನಹಳ್ಳಿಯ ಕಚೇರಿಗೆ ಹೋಗಿ ರಾತ್ರಿ 11-30 ಗಂಟೆಯೊಳಗೆ ಮನೆಗೆ ಬರುತ್ತಿದ್ದರು.

ಅದರಂತೆ ನಿನ್ನೆ  ರಾತ್ರಿ 8ಕ್ಕೆ  ನಾಗರಭಾವಿಯ ಜಿಮ್’ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ರಾತ್ರಿ 12 ಗಂಟೆ ಕಳೆದರೂ ವಾಪಸ್ ಬಂದಿರಲಿಲ್ಲ. ಹೀಗಾಗಿ ನನ್ನ ಚಿಕ್ಕಪ್ಪ ಮೌಸಿನ್ ಖಾನ್ ರವರು ನಮ್ಮ ತಂದೆಯನ್ನು ನೋಡಿಕೊಂಡು ಬರಲು ಕಳುಹಿಸಿದ್ದು ನಮ್ಮ ತಂದೆ ಜಿಮ್’ಗೆ ಹೋಗಿರುವುದಿಲ್ಲವೆಂದು ಅವರಿಂದ ತಿಳಿಯಿತು.

ನಂತರ ಕಚೇರಿ ಬಳಿಗೆ ಹೋಗಿ ನೋಡಿದಾಗ ಬಾಗಿಲು ಹಾಕಲಾಗಿದ್ದು, ನಾವು ಎಲ್ಲಾ ಕಡೆ ಹುಡುಕುತ್ತಿದ್ದಾಗ ಮುಂಜಾನೆ 2ರ ವೇಳೆ ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೋಲ್ ಬಂಕ್ ಹಿಂಭಾಗದ ತಂದೆಗೆ ಸೇರಿದ ಮನೆಯ ಬಳಿಗೆ ಹೋಗಿದ್ದು ಅಲ್ಲಿ ಮನೆಯ ಹೊರಗೆ ನಮ್ಮ ತಂದೆಯವರ ಜಾವಾ ಬೈಕ್ ನಿಂತಿತ್ತು.

ನಾನು ಮನೆಯ ಬಳಿ ಹೋದಾಗ ಬಾಗಿಲ ಬೀಗ ತೆರೆದಿದ್ದು,ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣ ನಾನು ಮೊಬೈಲ್ ಟಾರ್ಚ್ ಹಾಕಿಕೊಂಡು ಮನೆಯೊಳಗೆ ಹೋಗಿ ನೋಡಲಾಗಿ ಮನೆಯ ರೂಂ ನಲ್ಲಿ ನಮ್ಮ ತಂದೆಯವರು ಹಾಸಿಗೆ ಮೇಲೆ ಅಂಗಾತ ಬಿದ್ದಿದ್ದರು.

ಅವರ ತಲೆಯಲ್ಲೆಲ್ಲಾ ರಕ್ತಗಾಯವಾಗಿ ಗೋಡೆಯ ಮೇಲೆ ರಕ್ತದ ಕಲೆಯಾಗಿತ್ತು. ನಮ್ಮ ತಂದೆಯವರ ದೇಹ ತಣ್ಣಗಾಗಿದ್ದು ಆಗಲೇ ಮೃತಪಟ್ಟಿದ್ದರು. ಯಾರೋ ನಮ್ಮ ತಂದೆಯವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ.

ನಮ್ಮ ತಂದೆಯವರ ಜೊತೆ ವ್ಯವಹಾರ ಮಾಡುತ್ತಿದ್ದ ಗಂಗೊಂಡನಹಳ್ಳಿಯ ವಸೀಮ್ ಮತ್ತು ಜೋಹರ್ ತಂದೆಯವರಿಗೆ ಲಕ್ಷಾಂತರ ರೂಪಾಯಿ ಹಣ ಕೊಡಬೇಕಿತ್ತು. ಇವರೇ ಕೊಲೆ ಮಾಡಿಸಿರಬಹುದೆಂದು ಇವರ ಮೇಲೆ ಹಾಗೂ ಯಾವಾಗಲೂ ನಮ್ಮ ತಂದೆ ಜೊತೆಯಲ್ಲಿ ಓಡಾಡಿಕೊಂಡಿದ್ದ ಇಲ್ಯಾಸ್ ಖಾನ್ ಎಂಬುವರ ಮೇಲೆ ನನಗೆ ಅನುಮಾನವಿದೆ ಎಂದು ತಿಳಿಸಿದ್ದಾರೆ.

ಕೊಲೆಯಾದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ನಿಂಬರಗಿ ತಿಳಿಸಿದರು.

Join Whatsapp
Exit mobile version