Home ಟಾಪ್ ಸುದ್ದಿಗಳು ಸ್ಮೃತಿ ಇರಾನಿ ಪುತ್ರಿಯ ಬಾರ್ ಮುಂದೆ ಯುವ ಕಾಂಗ್ರೆಸ್ ಪ್ರತಿಭಟನೆ

ಸ್ಮೃತಿ ಇರಾನಿ ಪುತ್ರಿಯ ಬಾರ್ ಮುಂದೆ ಯುವ ಕಾಂಗ್ರೆಸ್ ಪ್ರತಿಭಟನೆ

ಪಣಜಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ  ಪುತ್ರಿ ಜೋಯಿಶ್ ಇರಾನಿ ಅವರು ಕಾನೂನುಬಾಹಿರವಾಗಿ ರೆಸ್ಟೋರೆಂಟ್ ಮತ್ತು ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಾರ್  ಮುಂದೆ ಪ್ರತಿಭಟನೆ ನಡೆಸಿದರು.

ಗೋವಾ ಯುವ ಕಾಂಗ್ರೆಸ್ ನಾಯಕ ವರದ್ ಮಥೋಲ್ಕಾ ಮತ್ತು ರಾಜ್ಯ ಕಾಂಗ್ರೆಸ್ ವಕ್ತಾರ ಅಮರನಾಥ್ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಈ ಅಕ್ರಮ ಹಾಸ್ಟೆಲ್ ಅನ್ನು ತಕ್ಷಣವೇ ಮುಚ್ಚಬೇಕು ಎಂದು ಘೋಷಣೆಗಳನ್ನು ಕೂಗಿದರು. ಈ ವಿಷಯದಲ್ಲಿ ಸಚಿವೆ ಸ್ಮೃತಿ ಇರಾನಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಮತ್ತು ಅಮಿಚ್, ಸ್ಮೃತಿ ಇರಾನಿ ಮಗಳು ಜೋಯಿಶ್ ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ನಕಲಿ ಪರವಾನಗಿಯಡಿ ಮದ್ಯದಂಗಡಿಯೂ ಅಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೇ 2021 ರಲ್ಲಿ ನಿಧನರಾದ ವ್ಯಕ್ತಿಯ ಹೆಸರಲ್ಲಿ 13 ತಿಂಗಳ ನಂತರ 2022 ರ ಜೂನ್ ನಲ್ಲಿ ಸ್ಮೃತಿ ಇರಾನಿ ಮಗಳು ಪರವಾನಗಿಯನ್ನು ಪಡೆದಿದ್ದಾರೆ. ಇದು ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದ್ದರು.

ಗೋವಾ ಕಾನೂನಿನ ಪ್ರಕಾರ, ರೆಸ್ಟೋರೆಂಟ್ ಗೆ ಕೇವಲ ಒಂದು ಬಾರ್ ಅನ್ನು ಮಾತ್ರ ನಡೆಸಲು ಪರವಾನಗಿ ನೀಡಬಹುದು. ಆದರೆ ಸ್ಮೃತಿ ಇರಾನಿ ಅವರ ಮಗಳಿಗೆ 2 ಲೈಸನ್ಸ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಚಿವೆ ಸ್ಮೃತಿ ಇರಾನಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಸ್ಮೃತಿ ಇರಾನಿಯನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ಹೇಳಿದ್ದರು.

ಈ ಆರೋಪ ಗೋವಾದಲ್ಲಿ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಸಂಚಲನ ಸೃಷ್ಟಿಸಿದ್ದು, ಯಾವುದೇ ಪುರಾವೆಗಳಿಲ್ಲದೆ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ.

ಸ್ಮೃತಿ ಇರಾನಿ ಮತ್ತು ಅವರ ಮಗಳ ವಕೀಲರು ಈಗಾಗಲೇ ಕಾಂಗ್ರೆಸ್ ನ ಆರೋಪವನ್ನು ನಿರಾಕರಿಸಿದ್ದರೂ ಗೋವಾ ಯುವ ಕಾಂಗ್ರೆಸ್ ಕಾರ್ಯಕರ್ತರು ಬಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

Join Whatsapp
Exit mobile version