ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ಮೋದಿ ರದ್ದುಗೊಳಿಸಿದ ಕುರಿತು ದೇಶದಲ್ಲಿ ವ್ಯಾಪಕ ಪರ ವಿರೋಧ ಚರ್ಚೆ ಆಗುತ್ತಿರುವ ಬೆನ್ನಲ್ಲೇ, ಯೂತ್ ಕಾಂಗ್ರೆಸ್ ವತಿಯಿಂದ ರೈತರ ಚಳುವಳಿಯಲ್ಲಿ ಪ್ರಾಣ ಕಳೆದುಕೊಂಡ ರೈತರ ಸ್ಮರಣಾರ್ಥ ಕ್ಯಾಂಡಲ್ ಮಾರ್ಚ್ ಆಯೋಜಿಸಲಾಗಿತ್ತು.
ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಮೊಂಬತ್ತಿ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಸುಮಾರು 700 ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ರೈತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ದೇಶಾದ್ಯಂತ ಸಮಾನ ಮನಸ್ಕ ಪ್ರಗತಿಪರರಿಂದ ಪ್ರತಿಭಟನೆ ನಡೆಯುತ್ತಿದೆ.