Home ಟಾಪ್ ಸುದ್ದಿಗಳು ಯುವ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ ಕುರಿತು ದೂರು ನೀಡಿದರೆ ತನಿಖೆ- ಆರಗ ಜ್ಞಾನೇಂದ್ರ

ಯುವ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ ಕುರಿತು ದೂರು ನೀಡಿದರೆ ತನಿಖೆ- ಆರಗ ಜ್ಞಾನೇಂದ್ರ

ಬೆಂಗಳೂರು: ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧಿ ಕೃತ್ಯಗಳಲ್ಲಿ ಭಾಗವಹಿಸುವ ಯಾವುದೇ ಪೊಲೀಸ್ ಸಿಬ್ಬಂದಿ ವಿರುದ್ದ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಚಿವರು ಇಂದು ಚಾಮರಾಜನಗರ ವ್ಯಾಪ್ತಿಯಲ್ಲಿ, ರೂ 7.40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಟ್ರಾಫಿಕ್ ಪೊಲೀಸ್ ಠಾಣೆಯ ಶಂಕುಸ್ಥಾಪನೆ ಕಾರ್ಯ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.


ಇತ್ತೀಚಿಗೆ ಮುಖ್ಯಮಂತ್ರಿಗಳ ನಿವಾಸದ ಬಳಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತವಾಗಿದ್ದ ಇಬ್ಬರು ಪೊಲೀಸರು, ನಿಷೇಧಿತ ಗಾಂಜಾ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂತಹ ಹೀನ ಕೃತ್ಯಗಳನ್ನು ಸಹಿಸಲಾಗುವುದಿಲ್ಲ, ಕೇವಲ ಬೆರಳಣಿಕೆ ಯಷ್ಟು ಮಂದಿ ಸಿಬ್ಬಂದಿಯಿಂದ, ಸುಮಾರು ಒಂದು ಲಕ್ಷಕ್ಕೂ ಮೀರಿ ಇರುವ ಇಲಾಖೆ ಸಿಬ್ಬಂದಿಗಳಿಗೆ ಕೆಟ್ಟ ಹೆಸರು ಬರುತ್ತದೆ ಎಂದರು.
ಅಪರಾಧ ಜಗತ್ತನ್ನು ಬಗ್ಗು ಬಡಿಯಲು ನೇಮಕವಾದ ಸಿಬ್ಬಂದಿಗಳು, ಅವರೊಂದಿಗೇ ಶಾಮೀಲಾಗುವುದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯಿಸಿದ ಸಚಿವರು, ಅಂಥವರನ್ನು ಕೇವಲ ಸೇವೆಯಿಂದ ಅಮಾನತು ಮಾಡಿದರೆ ಸಾಲದು. ಅಂಥವರು ಇಲಾಖೆಯಲ್ಲಿ ಇರಬಾರದು ಎಂದು ಖಾರವಾಗಿ ನುಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕೆಲವು ಯುವ ಕಾಂಗ್ರೆಸ್ ನಾಯಕರು, ಕಳೆದ ರಾತ್ರಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ನಗರದ ಪೊಲೀಸರು ಈವರೆಗೆ ಯಾವುದೇ ದೂರನ್ನು ಯಾರಿಂದಲೂ ಪಡೆದುಕೊಂಡಿಲ್ಲ. ದೂರು ದಾಖಲಾದರೆ ನಮ್ಮ ಪೊಲೀಸರು ವಿಚಾರಣೆ ನಡೆಸುತ್ತಾರೆ ಎಂದರು.


ಈ ಸಂದರ್ಭದಲ್ಲಿ, ಲೋಕಸಭಾ ಸದಸ್ಯ ಪಿ ಸಿ ಮೋಹನ್, ಕಾಂಗ್ರೆಸ್ ಎಂ ಎಲ್ ಎ ಜಮೀರ್ ಅಹ್ಮದ್, ವಿಧಾನ ಪರಿಷತ್ತಿನ ಸದಸ್ಯರಾದ ಯು ಬಿ ವೆಂಕಟೇಶ್, ರಮೇಶ್ ಗೌಡ ಹಾಗೂ ಲೆಹರ್ ಸಿಂಗ್ ಅವರು ಉಪಸ್ಥಿತರಿದ್ದರು.

Join Whatsapp
Exit mobile version