ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೇರಿದ ಹಿನ್ನೆಲೆಯಲ್ಲಿ ಪಕ್ಷದ ಬೆಂಬಲಿತೆಯೊಬ್ಬಳು ತನ್ನ ನಾಲಗೆಯನ್ನು ಕತ್ತರಿಸಿ ಹರಕೆ ತೀರಿಸಿದ ಘಟನೆ ನಡೆದಿದೆ. 32 ವರ್ಷದ ಯುವತಿ ತನ್ನ ನಾಲಗೆ ಕತ್ತರಿಸಿ ರಾಮನಾಥಪುರಂ ಜಿಲ್ಲೆಯ ಪರಮಕುಡಿ ಮುತ್ತಲಮ್ಮನ್ ದೇವಾಲಯಕ್ಕೆ ಬಂದಿದ್ದಾಳೆ. ಯುವತಿಯ ಬಾಯಿಯಿಂದ ರಕ್ತಸ್ರಾವವಾಗುವುದನ್ನು ಗಮನಿಸಿದ ಸ್ಥಳೀಯರು ಅವಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಡಿಎಂಕೆ ಅಧಿಕಾರಕ್ಕೆ ಬಂದರೆ ನಾಲಗೆ ಕತ್ತರಿಸಿ ದೇವರಿಗೆ ಅರ್ಪಿಸುವುದಾಗಿ ಈ ಹಿಂದೆ ಯುವತಿ ಪ್ರತಿಜ್ಞೆ ಮಾಡಿದ್ದಳು. ಈ ಹರಕೆಯನ್ನು ತೀರಿಸಲು ಕತ್ತರಿಸಿದ ನಾಲಗೆಯೊಂದಿಗೆ ಯುವತಿ ದೇವಸ್ಥಾನಕ್ಕೆ ಬಂದಿದ್ದಾಳೆ. ಆದರೆ ದೇವಾಲಯ ತೆರೆದಿಲ್ಲದ ಕಾರಣ ಯುವತಿಯು ದೇವಾಲಯದ ಹೊರಗೆ ನಿಂತು ಕಾಯುತ್ತಿದ್ದಳು. ಈ ವೇಳೆ ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದ ಯುವತಿಯನ್ನು ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
2015 ರಲ್ಲಿ ಜಯಲಲಿತಾ ಅವರನ್ನು ನ್ಯಾಯಾಲಯ ಶಿಕ್ಷೆಗೊಳಪಡಿಸಿದಾಗ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಬೆಂಬಲಿಗರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕಾಗಿ ಪರಿಹಾರವಾಗಿ ಎಐಎಡಿಎಂಕೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಬೇಕಾಗಿ ಬಂದಿತ್ತು. ಅತಿಯಾದ ರಾಜಕೀಯ ಆರಾಧನೆಯಿಂದಾಗಿ ಆತ್ಮಹತ್ಯೆಗಳು ಸೇರಿದಂತೆ ಈ ಹಿಂದೆ ಇಂತಹ ಹಲವಾರು ಘಟನೆಗಳು ತಮಿಳುನಾಡಿನಿಂದ ವರದಿಯಾಗಿವೆ.