ಯುವತಿ ನನ್ನನ್ನು ಭೇಟಿಯಾಗಿಲ್ಲ : ಡಿಕೆ ಶಿವಕುಮಾರ್ ಸ್ಪಷ್ಟನೆ

Prasthutha|

ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿರುವ ಈ ಸಂದರ್ಭ ಸಂತ್ರಸ್ತೆ ಯುವತಿ 4ನೇ ವೀಡಿಯೋ ಬಿಡುಗಡೆ ಮಾಡಿ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹೆಸರು ಪ್ರಸ್ತಾಪಿಸಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು ಆದರೆ ಯುವತಿ ನನ್ನನ್ನು ಭೇಟಿಯಾಗಿಲ್ಲ ಎಂದು ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ.‌

ನಿನ್ನೆ ಸಂತ್ರಸ್ತೆ ಯುವತಿ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ದುರ್ಬಳಕೆ ಮಾಡಿರುವ ಬಗ್ಗೆ ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಾಗಿದೆ.‌

- Advertisement -

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆಶಿ, ಯಾವುದೇ ಪಕ್ಷದವರಾಗಲಿ, ಯಾರೇ ನೊಂದವರಾಗಲಿ, ಸಮಸ್ಯೆಗಳಲ್ಲಿ ಸಿಲುಕಿಕೊಂಡವರು ಪ್ರಾಮಾಣಿಕವಾಗಿದ್ದು ಬಂದು ಕೇಳಿಕೊಂಡರೆ ಸಮಸ್ಯೆಗಳನ್ನು ಬಗೆಹರಿಸಲು ಖಂಡಿತವಾಗಿಯೂ ನಾವೆಲ್ಲರೂ ಪ್ರಯತ್ನ ಮಾಡುತ್ತೇವೆ. ಬೆಳಿಗ್ಗೆ ಎದ್ದು ನೀವು ನನ್ನ ಮನೆಗೆ ಬಂದು ಕೂತುಕೊಳ್ಳಿ, ನಾನು ಕಚೇರಿಯಲ್ಲಿದ್ದಾಗ ಬಂದು ನೋಡಿ ದಿನಕ್ಕೆ ಹತ್ತು ಜನ ಇಂತಹ ಅನೇಕ ಪರ್ಸನಲ್ ಸಮಸ್ಯೆಗಳನ್ನು ತಗೊಂಡು ಬರ್ತಾರೆ. ಅದು ಆರ್ಥಿಕ ಸಂಕಷ್ಟ, ಸರಕಾರದಿಂದ ಸಮಸ್ಯೆ  ಹೀಗೆ ಹಲವು ಸಮಸ್ಯೆಗಳನ್ನು ಮುಂದಿಟ್ಟು ಬಂದು ಭೇಟಿಯಾಗ್ತಾರೆ. ಹಾಗಾಗಿ ಯಾರು ಬೇಕಾದರೂ ಬಂದು ಭೇಟಿಯಾಗಬಹುದು. ಅದೇ ರೀತಿ ಸಂತ್ರಸ್ತೆ ಯುವತಿ ಭೇಟಿಯಾಗಲು ಬಂದಿರಬಹುದು.‌ಆದರೆ ನನ್ನನ್ನು ಭೇಟಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

- Advertisement -