Home ಟಾಪ್ ಸುದ್ದಿಗಳು ಹಾವಿಗೆ ಹಾಲೆರೆಯುತ್ತಿದ್ದೀರಿ, ಅದು ವಿಷವಲ್ಲದೆ ಅಮೃತ ಕಕ್ಕುವುದಿಲ್ಲ. ನೆನಪಿರಲಿ: ಕಾಂಗ್ರೆಸ್ ಎಚ್ಚರಿಕೆ

ಹಾವಿಗೆ ಹಾಲೆರೆಯುತ್ತಿದ್ದೀರಿ, ಅದು ವಿಷವಲ್ಲದೆ ಅಮೃತ ಕಕ್ಕುವುದಿಲ್ಲ. ನೆನಪಿರಲಿ: ಕಾಂಗ್ರೆಸ್ ಎಚ್ಚರಿಕೆ

►ಅದೇ ಗೂಂಡಾ ಪಡೆ  ನಳಿನ್ ಕುಮಾರ್ ಕಾರು ಉರುಳಿಸಲು ಹೊರಟಿತ್ತು. ಮುಂದಿನ ಸರದಿ ನಿಮ್ಮದಿರಬಹುದು

ಬೆಂಗಳೂರು: ಬಿಜೆಪಿ ಗೂಂಡಾಪಡೆಯನ್ನು ಪೋಷಿಸುತ್ತಿರುವ ಸಿಎಂ ಬೊಮ್ಮಾಯಿ ಅವರೇ, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದದ್ದನ್ನು ತಾವು ಎಂಜಾಯ್ ಮಾಡುತ್ತಿರಬಹುದು. ಆದರೆ ಅದೇ ಗೂಂಡಾಪಡೆ  ನಳಿನ್ ಕುಮಾರ್ ಅವರ ಕಾರು ಉರುಳಿಸಲು ಹೊರಟಿತ್ತು. ಮುಂದಿನ ಸರದಿ ನಿಮ್ಮದಿರಬಹುದು. ಹಾವಿಗೆ ಹಾಲೆರೆಯುತ್ತಿದ್ದೀರಿ, ಅದು ವಿಷವಲ್ಲದೆ ಅಮೃತ ಕಕ್ಕುವುದಿಲ್ಲ. ನೆನಪಿರಲಿ ಎಂದು ಕಾಂಗ್ರೆಸ್ ಎಚ್ಚರಿಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಅತಿವೃಷ್ಟಿಯಿಂದ 75ಕ್ಕೂ ಹೆಚ್ಚು ಜನ ಸತ್ತಿದ್ದಾರೆ, ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿದೆ, ನೂರಾರು ಮನೆ ಉರುಳಿವೆ. ಸರ್ಕಾರ ಮಾತ್ರ ಯಾವುದಕ್ಕೂ ಪರಿಹಾರ ಕ್ರಮ ಕೈಗೊಂಡಿಲ್ಲ. ವಿಪಕ್ಷ ನಾಯಕರು ಈ ಬಗ್ಗೆ ಬೆಳಕು ಚೆಲ್ಲಿದರೆ ವೈಫಲ್ಯ ಬಯಲಾಗುತ್ತದೆ ಎಂದು ಬಿಜೆಪಿ ದೈಹಿಕ ಹಲ್ಲೆಗೆ ಮುಂದಾಗಿದೆ. ಬಿಜೆಪಿ ಗೂಂಡಾಗಿರಿಗೆ ಧಿಕ್ಕಾರ ಎಂದು ಕಿಡಿಕಾರಿದೆ.

ಜನರ ಕಷ್ಟವನ್ನು ತಾವೂ ಕೇಳುವುದಿಲ್ಲ, ಬೆರೆಯವರೂ ಕೇಳಬಾರದು ಎಂಬ ಧೋರಣೆ ಬಿಜೆಪಿ ಸರ್ಕಾರದ್ದು. ಅತಿವೃಷ್ಟಿಗೆ ಕೈಗೊಂಡ ಕ್ರಮಗಳೇನು, ನೀಡಿದ ಪರಿಹಾರವೇನು? ಉತ್ತರಿಸುವ ಧೈರ್ಯ ಸರ್ಕಾರಕ್ಕಿದೆಯೇ? ಇದುವರೆಗೂ ನಷ್ಟದ ಸರ್ವೆ ನಡೆಸದೆ, ಪರಿಹಾರ ಘೋಷಿಸದೆ ಕುರ್ಚಿ ಕಸರತ್ತಿನಲ್ಲಿ ಮುಳುಗಿದ ಸರ್ಕಾರ ಈಗ ವಿಪಕ್ಷಗಳನ್ನು ತಡೆಯುತ್ತಿದೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ.

ಸಿದ್ದರಾಮಯ್ಯ  ಅವರ ಮೇಲೆ ನಿನ್ನೆಯಷ್ಟೇ ಅಲ್ಲ, ಇಂದೂ ಸಹ ಚಿಕ್ಕಮಗಳೂರಿನಲ್ಲಿ ದಾಳಿಗೆ ಯತ್ನಿಸಲಾಗಿದೆ. ಸರ್ಕಾರ ಏಕೆ ಎಚ್ಚೆತ್ತುಕೊಳ್ಳಲಿಲ್ಲ? ರಕ್ಷಣಾ ಕ್ರಮವನ್ನು ಏಕೆ ಬಿಗಿಗೊಳಿಸಲಿಲ್ಲ? ಸರ್ಕಾರ ಅನಾಹುತಗಳು ಸಂಭವಿಸಲಿ ಎಂದು ಬಯಸುತ್ತಿದೆಯೇ? ಕೊಡಗಿನಲ್ಲಾದ ಘಟನೆಯನ್ನು ಚಿಕ್ಕಮಗಳೂರಿನಲ್ಲೂ ಜರುಗಲು ಬಿಟ್ಟಿದ್ದೇಕೆ ಗೃಹಸಚಿವರೇ? ಸಿದ್ದರಾಮಯ್ಯ ಅವರು ಸಾಗುವ ದಾರಿಯಲ್ಲಿ ಹಾಗೂ ಅವರ ಆಗಮಿಸುವ ಸ್ಥಳದಲ್ಲೇ ಬಿಜೆಪಿ ಗೂಂಡಾಗಳು ಜಾಮಾಯಿಸಿದ್ದರೂ, ಮುನ್ಸೂಚನೆ ಇದ್ದರೂ ಪೊಲೀಸರು ಅವರನ್ನು ವಶಕ್ಕೆ ಪಡೆಯದೆ ಅವರ ರಕ್ಷಣೆಗೇ ನಿಂತಿದ್ದರು. ಗೂಂಡಾಗಳಿಗೆ ರಕ್ಷಣೆ ನೀಡುವುದು ಸರ್ಕಾರದ ನಿರ್ದೇಶನವಾಗಿತ್ತೇ? ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ SPಯನ್ನು ಕೂಡಲೇ ಅಮಾನತುಗೊಳಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

 ಬಂಧಿಸಲಾಗಿದ್ದ  ದಾಳಿ ಮಾಡಿದ ಗೂಂಡಾಗಳನ್ನು ರಾತ್ರೋರಾತ್ರಿ ಶಾಸಕ ಅಪ್ಪಚ್ಚು ರಂಜನ್ ಬಿಡಿಸಿಕೊಂಡು ಬಂದಿದ್ದಾರೆ. ಅರಗ ಜ್ಞಾನೇಂದ್ರ ಅವರೇ, ದಾಳಿಕೋರರ ಮೇಲೆ ಗಂಭೀರ ಪ್ರಕರಣ ದಾಖಲಿಸದಿರುವುದೇಕೆ? ಇದು ಸರ್ಕಾರಿ ಪ್ರಾಯೋಜಿತ ಕೃತ್ಯವಲ್ಲವೇ? ಇದು ವಿಪಕ್ಷ ನಾಯಕರ ಪ್ರಾಣ ಹಾನಿಯ ಪ್ರಯತ್ನ ಎಂದೇ ಭಾವಿಸಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಕ್ಷಣೆ ಸರ್ಕಾರದ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅತಿವೃಷ್ಟಿ ಹಾನಿ ವೀಕ್ಷಣೆಗೆ ತೆರಳಿದ್ದ ವಿಪಕ್ಷ ನಾಯಕರಿಗೆ ರಕ್ಷಣೆ ಇಲ್ಲ ಎಂದಾದರೆ ಜನಸಾಮಾನ್ಯರ ರಕ್ಷಣೆ ಈ ಸರ್ಕಾರದಿಂದ ಸಾಧ್ಯವೇ? ಗೃಹಸಚಿವರು ಇನ್ನೂ ಹುದ್ದೆಯಲ್ಲಿರಲು ಅರ್ಹರೇ? ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು. ಗೃಹಸಚಿವರು ಹೊತ್ತಿರುವ ಜವಾಬ್ದಾರಿ ಕಾನೂನು ಸುವ್ಯವಸ್ಥೆ ಕಾಪಾಡುವುದೋ ಅಥವಾ ಗೂಂಡಾ ಪೋಷಣೆ ಮಾಡುವುದೋ? ಎಂದು ಪ್ರಶ್ನಿಸಿದೆ.

ಬಿಜೆಪಿ ಗೂಂಡಾಪಡೆ ವಿಪಕ್ಷ ನಾಯಕ  ಸಿದ್ದರಾಮಯ್ಯ ಅವರ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ? ಗುಪ್ತಚರ ಇಲಾಖೆ ICUನಲ್ಲಿದೆ, ಸರ್ಕಾರ ಸತ್ತಿದೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಹರಿಹಾಯ್ದಿದೆ.

Join Whatsapp
Exit mobile version