ವಾರಣಾಸಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೂಡಲೇ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಂದು ಬೆಳಗ್ಗೆ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ವಾರಣಾಸಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ಬಳಿಕ ಹೆಲಿಕಾಪ್ಟರ್’ನಲ್ಲಿ ಲಖನೌಗೆ ತೆರಳಿದರು.
ಲಖನೌಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆದ ಬಳಿಕ ಅದರ ಕಿಟಕಿಗೆ ಪಕ್ಷಿವೊಂದು ಬಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಪೈಲಟ್ ತುರ್ತು ಭೂಸ್ಪರ್ಶಕ್ಕೆ ಮುಂದಾಗಿದ್ದು, ಹೆಲಿಕಾಪ್ಟರ್ ಅನ್ನು ವಾರಣಾಸಿಯ ಪೊಲೀಸ್ ಲೈನ್ಸ್ ಮೈದಾನದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲರಾಜ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಶನಿವಾರ ವಾರಣಾಸಿಗೆ ಬಂದಿದ್ದ ಆದಿತ್ಯನಾಥ್ ಅವರು ನಗರದ ಕಾಶಿ ವಿಶ್ವನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನಾ ಸಭೆಯನ್ನು ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.