ರಾಮನಗರ: ಅಧಿಕಾರದಲ್ಲಿರುವ ಪಕ್ಷಕ್ಕೆ ಪಕ್ಷಾಂತರ ಮಾಡಿಕೊಂಡೇ ಬಂದಿರುವ ಸಿ.ಪಿ. ಯೋಗೇಶ್ವರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಹರಕೆಯ ಕುರಿಯಾಗಿದ್ದಾರೆ ಎಂದು ಬಿಜೆಪಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಲ್ಲಿ ಯೋಗೇಶ್ವರ್ ಮೊದಲ ಸಾಲಿನ ನಾಯಕರಾಗುವುದಿಲ್ಲ. ಬದಲಿಗೆ, ಮೂರನೇ ಸಾಲಿನ ನಾಯಕನಾಗಿ ಹಿಂದಕ್ಕೆ ಸರಿದಿದ್ದಾರೆ ಎಂದು ನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಂದು ವ್ಯಂಗ್ಯವಾಡಿದರು.
ವೈಯಕ್ತಿಕ ಅನುಕೂಲಕ್ಕಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆಯೇ ಹೊರತು, ಅಭಿವೃದ್ಧಿಗಾಗಿ ಅಲ್ಲ. ಪ್ರತಿ ಚುನಾವಣೆಗೆ ಒಂದೊಂದು ಪಕ್ಷದ ಪರ ವಾಲುವುದೇ ಅವರ ಚಾಳಿ ಎಂದು ಟೀಕಿಸಿದರು.
ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಿಸುವ ಸಲುವಾಗಿ ನಾನು, ಡಾ.ಅಶ್ವತ್ಥನಾರಾಯಣ ಸೇರಿದಂತೆ ಬಿಜೆಪಿ ನಾಯಕರು ಪ್ರಯತ್ನ ಮಾಡಿದೆವು. ಕಡೆಗೆ ಜೆಡಿಎಸ್ ಟಿಕೆಟ್ ನೀಡಲು ಎಚ್.ಡಿ. ಕುಮಾರಸ್ವಾಮಿ ಒಪ್ಪಿಕೊಂಡರು. ಅದನ್ನೂ ನಿರಾಕರಿಸಿದಾಗ ಬಿಜೆಪಿಯಿಂದಲೇ ಕಣಕ್ಕಿಳಿಸಲು ಮುಂದಾದರು. ಆದರೆ, ಅಷ್ಟೊತ್ತಿಗಾಗಲೇ ಯೋಗೇಶ್ವರ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ, ರಾತ್ರೋರಾತ್ರಿ ಆ ಪಕ್ಷ ಸೇರಿ ಬಿಜೆಪಿಗೆ ದ್ರೋಹ ಬಗೆದರು ಎಂದರು.