Home ಟಾಪ್ ಸುದ್ದಿಗಳು ಯೋಗೀಶ್ ಗೌಡ ಕೊಲೆ ಪ್ರಕರಣ​: ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ

ಯೋಗೀಶ್ ಗೌಡ ಕೊಲೆ ಪ್ರಕರಣ​: ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ

ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಹಿನ್ನಡೆಯಾಗಿದೆ.

ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿದೆ.

ಸಿಬಿಐ ಪರ SPP ಗಂಗಾಧರ ಶೆಟ್ಟಿ ಷರತ್ತು ಸಡಿಲಿಸದಂತೆ ವಾದಿಸಿದ್ದರು. ಧಾರವಾಡದಲ್ಲಿ ಸ್ಪರ್ಧೆಗೆ ಟಿಕೆಟ್ ಪಡೆಯುವ ಮುನ್ನ ಕೋರ್ಟ್ ಅನುಮತಿ ಪಡೆದಿಲ್ಲ. ಟಿಕೆಟ್ ಪಡೆದ ನಂತರ ಕ್ಷೇತ್ರದ ಭೇಟಿಗೆ ಅನುಮತಿ ನಿರಾಕರಿಸಲಾಗಿದೆ. ಪ್ರಮುಖ ಸಾಕ್ಷಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಧಾರವಾಡ ಭೇಟಿಗೆ ಅನುಮತಿ ನಿರಾಕರಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನ ಜಡ್ಜ್ ಬಿ.ಜಯಂತ್ ಕುಮಾರ್ ಆದೇಶಿಸಿದ್ದಾರೆ.

ಜಾಮೀನು ನೀಡುವಾಗ ಷರತ್ತು ವಿಧಿಸಿದ್ದ ವಿನಯ್ ಕುಲಕರ್ಣಿ ಧಾರವಾಡ ಪ್ರವೇಶಿಸಬಾರದೆಂದು ಸೂಚಿಸಿತ್ತು. ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿರುವ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶ ನಿರಾಕರಿಸಿತ್ತು. ಇದೀಗ ಶಾಸಕನಾಗಿ ಆಯ್ಕೆಯಾಗಿರುವ ಕಾರಣಕ್ಕೆ ಧಾರವಾಡ ಪ್ರವೇಶಿಸಲು ಅನುಮತಿ ನೀಡುವಂತೆ ವಿನಯ್ ಕುಲಕರ್ಣಿ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಸಿಬಿಐ ಪರ ಎಸ್‌ಪಿಪಿ ಗಂಗಾಧರ ಶೆಟ್ಟಿ ಷರತ್ತು ಸಡಿಲಿಸದಂತೆ ವಾದಿಸಿದ್ದರು. ಈ ಹಿಂದೆಯೂ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಲಾಗಿದೆ. ಧಾರವಾಡ ಪ್ರವೇಶಿಸಲು ಅನುಮತಿ ನೀಡಿದರೆ ಮತ್ತೆ ಸಾಕ್ಷ್ಯ ವಿಚಾರಣೆಗೆ ಸಮಸ್ಯೆ ಆಗಬಹುದು. ಸುಪ್ರೀಂಕೋರ್ಟ್ ಕೂಡಾ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿದ್ದ ಷರತ್ತನ್ನು ಸಡಿಲಿಸಿಲ್ಲ.

ಹೀಗಾಗಿ ವಿನಯ್ ಕುಲಕರ್ಣಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು. ಇನ್ನು ಶಾಸಕನಾಗಿರುವ ಕಾರಣಕ್ಕೆ ಜನರ ಅಹವಾಲುಗಳಿಗೆ ಸ್ಪಂದಿಸಬೇಕೆಂಬ ವಾದವನ್ನು ಕೋರ್ಟ್ ಒಪ್ಪಿಲ್ಲ. ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಈ ಹಿಂದೆ ಸಾಕ್ಷಿಗಳಿಗೆ ಬೆದರಿಕೆ ಹಾಕಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ.

ಧಾರವಾಡ ಭೇಟಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಆದೇಶ ನೀಡಿದ್ದಾರೆ. ಹೀಗಾಗಿ ಧಾರವಾಡ ಪ್ರವೇಶಿಸುವ ಶಾಸಕ ವಿನಯ್ ಕುಲಕರ್ಣಿಯ ಮತ್ತೊಂದು ಯತ್ನವೂ ವಿಫಲವಾದಂತಾಗಿದೆ.

Join Whatsapp
Exit mobile version