Home ಟಾಪ್ ಸುದ್ದಿಗಳು ಯತೀಂದ್ರ ಸೂಪರ್ ಸಿಎಂ: ಕುಮಾರಸ್ವಾಮಿಯ ಸಣ್ಣತನದ ಪರಮಾವಧಿ ಎಂದ ಸಿಎಂ ಇಬ್ರಾಹಿಂ

ಯತೀಂದ್ರ ಸೂಪರ್ ಸಿಎಂ: ಕುಮಾರಸ್ವಾಮಿಯ ಸಣ್ಣತನದ ಪರಮಾವಧಿ ಎಂದ ಸಿಎಂ ಇಬ್ರಾಹಿಂ

ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯರನ್ನು ಸೂಪರ್ ಸಿಎಂ ಎಂದು ಮಾಜಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಕ್ಕೆ ಸಿಎಂ ಇಬ್ರಾಹಿಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮಗೆ ಒಬ್ಬ ಮಗ ಇದ್ದಾನೆ. ಸಿದ್ದರಾಮಯ್ಯನಿಗೂ ಒಬ್ಬನೇ ಮಗ ಇರೋದು. ಒಬ್ಬ ಮಗ ತೀರಿಕೊಂಡು ಹೋದ ಪಾಪ. ಯತೀಂದ್ರ ಅವರ ಅಪ್ಪನ ಕ್ಷೇತ್ರ ನೋಡಿಕೊಳ್ಳುತ್ತಿದ್ದಾನೆ. ಏನೋ ಈ ಹುಡುಗ ಬೆಳೀತಾ ಇದ್ದಾನೆ. ಅವನು ಬೆಳೆದಂತೆ ನೀನೂ ಬೆಳಿಯಪ್ಪ ಅಂತಾ ನಿಮ್ಮ ಮಗನನ್ನು ಬೆನ್ನು ತಟ್ಟುವುದು ಬಿಟ್ಟು, ಸೂಪರ್‌ ಸಿಎಂ, ಡಿಸಿಎಂ ಎಂದು ಹೇಳುವುದು ಸಣ್ಣತನದ ಪರಮಾವಧಿ ಎಂದು ಇಬ್ರಾಹಿಂ ಹೇಳಿದ್ದಾರೆ.

ಸುದ್ದಿಗಾರರ ಜತೆ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಇನ್ನಿತರ ವಿಚಾರ ಹಂಚಿಕೊಂಡರು. ಕುಮಾರಸ್ವಾಮಿ ಟಿ.ಎ. ಶರವಣ ಅವರಿಂದ ಹಣ ಪಡೆದು ಟಿಕೆಟ್ ಕೊಡಲಾಗಿದೆ ಎಂಬುದನ್ನು ಹೇಳಿದರು. ಶರವಣ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡಲು ಹಣ ಪಡೆದಿಲ್ಲ ಎಂದು ಕುಮಾರಸ್ವಾಮಿ ಅವರು ತಮ್ಮ ಮಗನ ಮೇಲೆ ಪ್ರಮಾಣ ಮಾಡಲು ಸಿದ್ಧವೇ ಎಂದು ಸವಾಲು ಹಾಕಿದರು.

ಹೆಚ್‌.ಡಿ. ದೇವೇಗೌಡರಿಗೆ ಬಿಜೆಪಿ ಸಖ್ಯ ತೊರೆದು ಬರುವಂತೆ ಈಗಲೂ ಮನವಿ ಮಾಡುತ್ತೇವೆ ಎಂದ ಇಬ್ರಾಹಿಂ, ಮೈತ್ರಿಯಿಂದ ಹಿಂದೆ ಸರಿಯದಿದ್ದರೆ ಡಿಸೆಂಬರ್‌ 9ರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೇ ಬದಲಾವಣೆ ಮಾಡುವ ನಿರ್ಣಯ ಕೈಗೊಳ್ಳುತ್ತೇವೆ ಎಂದದೂ ಎಚ್ಚರಿಕೆ ನೀಡಿದರು.

ಯಡಿಯೂರಪ್ಪ ಅವರ ಮಗನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಆರ್‌. ಅಶೋಕ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇನ್ನು ಬಿಜೆಪಿಯವರು ದೇವೇಗೌಡರನ್ನು ಏನಾದರೂ ಕೇಳುತ್ತಾರಾ? ಜೆಡಿಎಸ್‌ನವರಿಗೆ ಏನು ಉಳಿದಿದೆ? 19 ಜನ ಶಾಸಕರಲ್ಲಿ 17 ಮಂದಿ ಗೌಡರ ಕುಟುಂಬದ ಜೊತೆ ಇಲ್ಲ ಎಂದರು.

Join Whatsapp
Exit mobile version