Home ಟಾಪ್ ಸುದ್ದಿಗಳು ಯಾಸೀರ್ ಖಾನ್ ಬಿಜೆಪಿ ಏಜೆಂಟ್: ಕಾಂಗ್ರೆಸ್ ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಆಕ್ರೋಶ

ಯಾಸೀರ್ ಖಾನ್ ಬಿಜೆಪಿ ಏಜೆಂಟ್: ಕಾಂಗ್ರೆಸ್ ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಆಕ್ರೋಶ

ಹಾವೇರಿ: ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿರುವ ಯಾಸೀರ್ ಅಹ್ಮದ್ ಖಾನ್ ಪಠಾಣ್ ಬಿಜೆಪಿ ಏಜೆಂಟ್. ಕಾಂಗ್ರೆಸ್ ರೌಡಿಶೀಟರ್ ಗೆ ಟಿಕೆಟ್ ನೀಡಿದೆ ಎಂದು ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ವಂಚಿತ ಅಜ್ಜಂಫೀರ್ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ನಿಷ್ಟಾವಂತ ಕಾರ್ಯಕರ್ತ. ಇನ್ನೂ ಅವಕಾಶ ಇದೆ, ನನಗೆ ಟಿಕೆಟ್ ಕೊಡಲಿ. ಯಾಸೀರ್ ಖಾನ್ ಪಠಾಣ್ ಒಬ್ಬ ರೌಡಿಶೀಟರ್, ಅವನು ಬಿಜೆಪಿ ಏಜೆಂಟ್ ಎಂದು ಕಿಡಿ ಕಾರಿದ್ದಾರೆ.

ಈ ಬಗ್ಗೆ ಖಾದ್ರಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 23 ವರ್ಷದಿಂದ ನಾನು ಕಾಂಗ್ರೆಸ್ ಕಟ್ಟಿದ್ದೇನೆ. ಒಮ್ಮೆ ಶಾಸಕನಾಗಿದ್ದೇನೆ, ಮೂರು ಬಾರಿ ಬಸವರಾಜ ಬೊಮ್ಮಾಯಿ ವಿರುದ್ಧ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದೇನೆ. ಬೊಮ್ಮಾಯಿ ವಿರುದ್ಧ ಆಗ ಯಾರೂ ಟಿಕೆಟ್ ಪಡೆಯಲು ತಯಾರು ಇರಲಿಲ್ಲ. ಅಂಥ ಸಂದರ್ಭದಲ್ಲಿ ನಾನು ನಿಂತಿದ್ದೇನೆ. ನಾನು ಸ್ಪರ್ಧೆ ಮಾಡಿದಾಗ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ನ ಯಾವ ಮುಖಂಡರು ಪ್ರಚಾರಕ್ಕೆ ಬರಲಿಲ್ಲ. ‘ಹೇ ಬೊಮ್ಮಾಯಿ ನಿಂತಿದ್ದಾರೆ ಹೇಗೆ ಪ್ರಚಾರ ಮಾಡಲಿ’ ಅನ್ನುತ್ತಿದ್ದರು. ಆ ಸಮಯದಲ್ಲಿ ಕೈ ಮುಗಿದು ಕೇಳಿದರೂ ಯಾರೂ ಪ್ರಚಾರಕ್ಕೆ ಬರಲಿಲ್ಲ. ಲಿಂಗಾಯತ ನಾಯಕರು, ಕುರುಬ, ನಾಯಕ ಸಮುದಾಯದ ಯಾವೊಬ್ಬ ನಾಯಕರೂ ಬಂದಿರಲಿಲ್ಲ. ಅವರೆಲ್ಲರು ಬಂದು ಪ್ರಚಾರ ಮಾಡಿದರೆ ನಾನು ಗೆದ್ದು ಬೊಮ್ಮಾಯಿ ಸೋಲುತಿದ್ದರು ಎಂದರು.

ನಾನು ಒಬ್ಬ ಅಲ್ಪಸಂಖ್ಯಾತ ಅನ್ನುವ ಕಾರಣಕ್ಕೆ ಬೇರೆ ಸಮುದಾಯದ ಯಾರೂ ಬಂದು ಪ್ರಚಾರ ಮಾಡಲಿಲ್ಲ. ಹೊಂದಾಣಿಕೆಯ ರಾಜಕಾರಣ ಮಾಡಿ ಬೊಮ್ಮಾಯಿಯನ್ನು ಗೆಲ್ಲಿಸಿದ್ದಾರೆ. ಈಗ ಹಾನಗಲ್ಲಿನ ಪಠಾಣ್‌ಗೆ ಟಕೆಟ್ ಕೊಟ್ಟಿದ್ದಾರೆ. ಅವನೊಬ್ಬ ರೌಡಿಶೀಟರ್, ಅವನ ಮೇಲೆ 17 ಕೇಸ್ ಇದೆ. ಕ್ಷೇತ್ರದ ಜನರು ಸ್ಥಳೀಯ ಅಭ್ಯರ್ಥಿಯನ್ನು ಬಯಸುತ್ತಾರೆ. ನಾನು ಸ್ಥಳೀಯನಾಗಿದ್ದೇನೆ, ಮುಂದಿನ ದಿನದಲ್ಲಿ ಪಿತೂರಿಯ ಎಲ್ಲಾ ವಿಚಾರ ಬಹಿರಂಗವಾಗಲಿದೆ ಎಂದು ಹರಿಹಾಯ್ದರು.

ನಾನು ಸಿದ್ದರಾಮಯ್ಯರ ಅಭಿಮಾನಿಯಾಗಿದ್ದೇನೆ. ಅವರ ವಿರುದ್ಧ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಟಿಕೆಟ್ ಕೈ ತಪ್ಪಿರುವ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿದೆ, ಒಳ ಒಪ್ಪಂದ ಆಗಿದೆ ಎಂದು ಜನ ಮಾತಾಡಿಕೊಳ್ಳುತ್ತಾರೆ. ಗೂಂಡಾಗಿರಿ ಮಾಡಿದವನಿಗೆ ಟಿಕೆಟ್ ಕೊಟ್ಟಿದ್ದಾರೆ. ಸೋಲುವವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ಪಕ್ಷೇತರವಾಗಿ ನಿಲ್ಲಲ್ಲು ಕಾರ್ಯಕರ್ತರ ಒತ್ತಡ ಹೆಚ್ಚಾಗಿದೆ. ನನ್ನ ಕಾರ್ಯಕರ್ತರು ವಿಷ ಕುಡಿಯಲು ಹೋಗಿದ್ದಾರೆ ಎಂದರು.

Join Whatsapp
Exit mobile version