ಬೆಂಗಳೂರು: ಆಯುಧ ಪೂಜೆಯ ದಿನದಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಪ್ರಯಾಣಿಕ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸಂಪ್ರದಾಯದಂತೆ ಪೂಜಿಸಬೇಕು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಪೂಜೆಗೆ ನೆರವಾಗುವಂತೆ ಪ್ರತಿ ವಾಹನಕ್ಕೆ 100 ರೂ ಮತ್ತು ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1000 ರೂ ಮುಂಗಡ ನಗದು ಪಡೆದು ಈ ಪೂಜಾ ಕಾರ್ಯಕ್ಕೆ ಎಂದಿನಂತೆ ವಿನಿಯೋಗಿಸಿ, ಆಚರಿಸಬೇಕು ಎಂದು ತಿಳಿಸಿದ ಶ್ರೀರಾಮುಲು, ರಾಜ್ಯದ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಮಸ್ತ ನೌಕರರಿಗೆ , ಅಧಿಕಾರಿಗಳಿಗೆ ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ಸಂತೋಷ, ಆರೋಗ್ಯವನ್ನು ಅನುಗ್ರಹಿಸಲಿ. ಸಾಂಕ್ರಾಮಿಕದ ಕರಿನೆರಳು ದೂರಸರಿದು, ಸಂಭ್ರಮ ಸಮೃದ್ಧಿಗಳ ಹೊಂಗಿರಣ ಮೂಡಲಿ ಎಂದು ಸಚಿವರು ಹಾರೈಸಿದ್ದಾರೆ.