ಹೊಸದಿಲ್ಲಿ: ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಫಿನ್ಲೆಂಡ್ ಸತತವಾಗಿ 6ನೇ ಬಾರಿಯೂ ಮೊದಲನೇ ಸ್ಥಾನದಲ್ಲಿದೆ.
ಭಾರತವು ನೆರೆಯ ನೇಪಾಳ, ಚೀನಾ, ಬಾಂಗ್ಲಾದೇಶಗಳಿಗಿಂತಲೂ ಕೆಳಗಿನ 126ನೇ ಸ್ಥಾನದಲ್ಲಿದೆ.
150 ರಾಷ್ಟ್ರಗಳ ವಿಶ್ವ ಸಂತೋಷ ಸೂಚ್ಯಂಕದಲ್ಲಿ ಫಿನ್ಲೆಂಡ್ ಮೊದಲ ಸ್ಥಾನದಲ್ಲಿದ್ದು, ಡೆನ್ಮಾರ್ಕ್ ಮತ್ತು ಐಸ್‌ಲ್ಯಾಂಡ್‌ಗಳು ಎರಡು, ಮೂರನೆಯ ಸ್ಥಾನಗಳಲ್ಲಿ ಇವೆ.
ಯುದ್ಧ ಕಾರಣದಿಂದ ರಷ್ಯಾ 72ಕ್ಕೆ ಮತ್ತು ಉಕ್ರೇನ್ 92ನೇ ಸ್ಥಾನಕ್ಕೆ ಕುಸಿದಿವೆ.
ಭಾರತ ಅತೃಪ್ತಿ ದೇಶ
ಭಾರತ ಅತೃಪ್ತಿ ದೇಶವಾಗಿದೆ ಎಂಬ ಅಂಶವನ್ನು ಈ ಸೂಚ್ಯಂಕ ಹೊರಹಾಕಿದೆ. ಬಡತನ, ಹಸಿವು, ನಿರುದ್ಯೋಗ, ಅಸಮಾನತೆ, ಭ್ರಷ್ಟಾಚಾರದಿಂದ ಭಾರತ ನರಳುತ್ತಿದೆ. ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ನಿರ್ಲಕ್ಷ್ಯದ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ಈ ಕಳಪೆ ಸಾಧನೆಗೆ ವ್ಯಾಪಕ ಟೀಕೆಗಳು ಬರುತ್ತಿವೆ. ‘ವಿಶ್ವಗುರು’ ಆಗುವ ಕನಸು ಕಾಣುತ್ತಿರುವ ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಜನರನ್ನ ಸಂತೋಷವಾಗಿಡಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ವೈಯಕ್ತಿಕ ಯೋಗಕ್ಷೇಮ,ಆದಾಯ, ಭ್ರಷ್ಟಾಚಾರದ ಮಟ್ಟ, ಆರೋಗ್ಯಕರ ಜೀವನ, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಸಾಮಾಜಿಕ ಬೆಂಬಲ, ವೈಯಕ್ತಿಕ ಸ್ವಾತಂತ್ರ್ಯ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.