Home ಕ್ರೀಡೆ ಐಸಿಸಿ ಟಿ-20 ವಿಶ್ವಕಪ್: ಅಫ್ಘಾನ್ ತಂಡವನ್ನು ಮಣಿಸಿ ಗೆಲುವಿನ ಖಾತೆ ತೆರೆದ ಟೀಮ್ ಇಂಡಿಯಾ

ಐಸಿಸಿ ಟಿ-20 ವಿಶ್ವಕಪ್: ಅಫ್ಘಾನ್ ತಂಡವನ್ನು ಮಣಿಸಿ ಗೆಲುವಿನ ಖಾತೆ ತೆರೆದ ಟೀಮ್ ಇಂಡಿಯಾ

ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನವನ್ನು 66 ರನ್’ಗಳ ಅಂತರದಲ್ಲಿ ಭರ್ಜರಿಯಾಗಿ ಸೋಲಿಸುವ ಮೂಲಕ ಟೀಮ್ ಇಂಡಿಯಾ ಗೆಲುವಿನ ಖಾತೆ ತೆರೆದಿದೆ. ಗೆಲುವಿಗೆ 210 ರನ್’ಗಳ ಕಠಿಣ ಗುರಿ ಪಡೆದಿದ್ದ ಮುಹಮ್ಮದ್ ನಬಿ ಪಡೆ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟದಲ್ಲಿ ಕೇವಲ 144 ರನ್ ಗಳಿಸಲಷ್ಟೇ ಶಕ್ತವಾಯಿತು.  ಬ್ಯಾಟಿಂಗ್’ನಲ್ಲಿ ಮಿಂಚು ಹರಿಸಿದ್ದ ರೋಹಿತ್ ಶರ್ಮಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿದ್ದ ಮುಹಮ್ಮದ್ ಶಮಿ  ಇಂದು 32 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಚಕ್ರವರ್ತಿ ಬದಲಿಗೆ ಸ್ಪಿನ್ ವಿಭಾಗದಲ್ಲಿ ಕಾಣಿಸಿಕೊಂಡ ಅನುಭವಿ ಆರ್. ಅಶ್ವಿನ್ 2 ವಿಕೆಟ್ ಪಡೆದರು.  

ಅಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸಿದರೂ ಟೀಮ್ ಇಂಡಿಯಾ ಗ್ರೂಪ್-2 ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 4 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಪಾಕ್ ಮೊದಲ ಸ್ಥಾನದಲ್ಲಿದೆ. 4 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿರುವ ಅಫ್ಘಾನಿಸ್ತಾನ ದ್ವಿತೀಯ ಹಾಗೂ 3 ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ನ್ಯೂಜಿಲೆಂಡ್ 3ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತ ಸೆಮಿಫೈನಲ್ ಪ್ರವೇಶ ಕಷ್ಟಸಾಧ್ಯವಾಗಿದೆ.

ಭಾರತದ ದಾಖಲೆ ಮೊತ್ತ..!

ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದಿದ್ದ ಭಾರತ ನಿಗದಿತ 20 ಓವರ್’ಗಳಲ್ಲಿ ಕೇವಲ 2 ವಿಕೆಟ್ ನಷ್ಟದಲ್ಲಿ 210 ರನ್’ಗಳಿಸಿತ್ತು. ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್’ಗಳು ಆರಂಭದಿಂದಲೂ ಅಫ್ಘಾನ್ ಬೌಲರ್’ಗಳ ಮೇಲೆ ಸವಾರಿ ಮಾಡಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ, ಬುಧವಾರದ ಪಂದ್ಯದಲ್ಲಿ ಭರ್ಜರಿಯಾಗಿಯೇ ಕಮ್’ಬ್ಯಾಕ್ ಮಾಡಿದ್ದಾರೆ. ಮೊದಲನೇ ವಿಕೆಟ್’ಗೆ 140 ರನ್’ಗಳ ಜೊತೆಯಾಟವಾಡಿದ ಆರಂಭಿಕ ಜೋಡಿ ಕಲಾತ್ಮಕ ಹೊಡೆತಗಳ ಮೂಲಕ ಮಿಂಚಿದರು.

48 ಎಸೆತಗಳನ್ನು ಎದುರಿಸಿದ ಕೆ.ಎಲ್. ರಾಹುಲ್ 2 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 69 ರನ್’ಗಳಿಸಿದ್ದ ವೇಳೆ ಗುಲ್ಬಾದಿನ್ ನೈಬ್ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆದರು. ಮತ್ತೊಂದು ತುದಿಯಲ್ಲಿ 47 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 3 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 74 ರನ್’ಗಳಿಸಿ ಕರೀಮ್ ಜಾನತ್’ಗೆ ವಿಕೆಟ್ ಒಪ್ಪಿಸಿದರು.

ಕ್ಯಾಪ್ಟನ್ ಕೊಹ್ಲಿ ಬದಲು 3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದ ರಿಷಭ್ ಪಂತ್ ಹಾಗೂ ರಾಹುಲ್ ನಿರ್ಗಮನದ ಬಳಿಕ ಕ್ರೀಸ್’ಗಿಳಿದ ಹಾರ್ದಿಕ್ ಪಾಂಡ್ಯಾ ಅಫ್ಘಾನ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿದರು. 13 ಎಸೆತಗಳನ್ನು ಎದುರಿಸಿದ ಪಂತ್ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 27 ರನ್ ಗಳಿಸಿದರೆ, ಅಷ್ಟೇ ಎಸೆತಗಳನ್ನು ಎದುರಿಸಿದ ಪಾಂಡ್ಯಾ 2 ಸಿಕ್ಸರ್ ಹಾಗೂ 4 ಬೌಂಡರಿಗಳ ಮೂಲಕ 35 ರನ್’ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 210 ರನ್’ಗಳಿಸಿತ್ತು. ಅಫ್ಘಾನಿಸ್ತಾನದ ಪರ ನವೀನ್ ಉಲ್ ಹಕ್ 4 ಓವರ್ ಎಸೆದು ಯಾವುದೇ ವಿಕೆಟ್ ಪಡೆಯದೇ 59 ರನ್’ಬಿಟ್ಟುಕೊಟ್ಟು ದುಬಾರಿಯಾದರು.

ನ್ಯೂಜಿಲೆಂಡ್ ಎದುರು ಹೋರಾಡಿ ಶರನಾದ ಸ್ಕಾಟ್ಲೆಂಡ್..!

ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವು ಉತ್ತಮ ಹೋರಾಟ ಪ್ರದರ್ಶಿಸಿದರೂ ಗೆಲುವಿನ ಸನಿಹದಲ್ಲಿ ಎಡವಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್, ಆರಂಭಿಕ ಗಪ್ಟಿಲ್ ಗಳಿಸಿದ 93 ರನ್’ಗಳ ಸಹಾಯದಿಂದ 5 ವಿಕೆಟ್ ನಷ್ಟದಲ್ಲಿ 172 ರನ್ ಕಲೆಹಾಕಿತ್ತು.

ಕಠಿಣ ಗುರಿಯಿದ್ದರೂ ಎದೆಗುಂದದೆ ಬ್ಯಾಟ್ ಬೀಸಿದ ಸ್ಕಾಟ್ಲೆಂಡ್ ಕೊನೆಯವರೆಗೂ ಹೋರಾಡಿ 20 ೋವರ್’ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 156 ರನ್ ಗಳಿಸಿತಾದರೂ, 16 ರನ್’ಗಳ ಅಂತರದಲ್ಲಿ ಸೋಲೊಪ್ಪಿಕೊಳ್ಳಬೇಕಾಯಿತು. ಮೈಕಲ್ ಲಿಸ್ಕ್  20 ಎಸೆತಗಳಲ್ಲಿ 42 ರನ್’ಗಳಿಸಿ ಅಜೇಯರಾಗುಳಿದರು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಇಶ್ ಸೋದಿ ತಲಾ ಎರಡು ವಿಕೆಟ್ ಪಡೆದರು.

Join Whatsapp
Exit mobile version