Home ಟಾಪ್ ಸುದ್ದಿಗಳು ಬಸ್ ಅಪಘಾತ ನಿಯಂತ್ರಿಸಲು ಚಾಲನಾ ಸಿಬ್ಬಂದಿಗೆ ಕಾರ್ಯಾಗಾರ

ಬಸ್ ಅಪಘಾತ ನಿಯಂತ್ರಿಸಲು ಚಾಲನಾ ಸಿಬ್ಬಂದಿಗೆ ಕಾರ್ಯಾಗಾರ

ಬೆಂಗಳೂರು: ಬಸ್ಸುಗಳ ಅಪಘಾತಗಳನ್ನು ನಿಯಂತ್ರಿಸಲು ನಿಗಮದ ಚಾಲನಾ ಸಿಬ್ಬಂದಿಗಳೊಂದಿಗೆ ಸಮಾಲೋಚನೆ, ಸಂವಾದ ಮತ್ತು ಜಾಗೃತಿ ಕಾರ್ಯಾಗಾರ ಬೆಂಗಳೂರಿನ ನಿಗಮದ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಗಾರದಲ್ಲಿ ಸುಮಾರು 35 ಮಂದಿ ಅಪಘಾತದಲ್ಲಿ ಭಾಗಿಯಾದಂತಹ ಚಾಲನಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಕಾರ್ಯಾಗಾರದಲ್ಲಿ ಅಪಘಾತ ಮಾಡಿರುವ ಚಾಲನಾ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಕಾರ್ಯಾಗಾರವು ತಮ್ಮ ದೋಷ ಸರಿಪಡಿಸಿಕೊಳ್ಳಲು ಹಾಗೂ ನಿಗಮವು ಮುಂದಿನ ದಿನಗಳಲ್ಲಿ ಅಪಘಾತಗಳನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕ ಡಾ. ನವೀನ್ ಭಟ್ ಸಹ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಈ ಕಾರ್ಯಾಗಾರದ ಉದ್ದೇಶ ಹಾಗೂ ನಿಖರತೆಯನ್ನು ಚಾಲನಾ ಸಿಬ್ಬಂದಿಗೆ ಸ್ಪಷ್ಟಪಡಿಸಿದರು.
ಒಂದು ಬಸ್ ಅಪಘಾತಕ್ಕೀಡಾದಲ್ಲಿ, ಬಸ್ಸಿನಲ್ಲಿರುವ ಪ್ರಯಾಣಿಕರಾಗಲಿ, ಇತರೆ ವಾಹನದ ಸವಾರ/ಪ್ರಯಾಣಿಕರುಗಳಿಗೆ ಉಂಟಾಗುವ ಸಾವು-ನೋವುಗಳ ಕುರಿತು ನಾವು ಚಿಂತಿಸಬೇಕು. ಕೆಲವರು ಶಾಶ್ವತವಾಗಿ ಅಂಗವೈಕಲ್ಯರಾಗುತ್ತಿದ್ದು, ಅವರ ಅವಲಂಬಿತರು ವಾರಸುದಾರರಿಲ್ಲದೆ ಜೀವ ಕಳೆಯುವಂತಾಗುವುದು ನಿಜಕ್ಕೂ ನೋವಿನ ಸಂಗತಿ ಹಾಗೂ ಭರಿಸಲಾಗದ ನಷ್ಟ. ಅವರ ಕುಟುಂಬದವರು ಮುಂದಿನ ಜೀವನ ನಡೆಸುವುದು ಬಹಳ ಕಷ್ಟಕರವಾಗುತ್ತಿದೆ ಎಂದು ಅವರು ತಿಳಿಸಿದರು.
ಅಪಘಾತ ಅಪಘಾತವೇ ಅದನ್ನು ಯಾರು ಬೇಕೆಂದು ಮಾಡದೇ ಇದ್ದರೂ ಸಹ, ಅಪಘಾತಗಳನ್ನು ನಿಯಂತ್ರಿಸಲೇಬೇಕು. ಅಪಘಾತಗಳ ಪ್ರಮಾಣವನ್ನು ಅವಲೋಕಿಸಿದಾಗ, ಶೇ.39 ರಷ್ಟು ಅಪಘಾತ 40 ರಿಂದ 50 ವರ್ಷ ವಯೋಮಾನದ ಚಾಲಕರಿಂದ ಸಂಭವಿಸಿರುತ್ತದೆ. ಶೇ.23 ರಷ್ಟು ಅಪಘಾತಗಳು 36 ರಿಂದ 40 ವರ್ಷದ ವಯಸ್ಸಿನ ಚಾಲಕರಿಂದ ಸಂಭವಿಸಿರುತ್ತದೆ. ಸಾವು-ನೋವುಗಳ ಪ್ರಮಾಣವನ್ನು ಅವಲೋಕಿಸಿದಾಗ 44% ಅಪಘಾತಗಳು ದ್ವಿಚಕ್ರ ವಾಹನಗಳು ಮತ್ತು 19% ಪಾದಚಾರಿಗಳು, ಶೇ.27 ರಷ್ಟು ಅಪಘಾತಗಳು ಮಧ್ಯಾಹ್ನದ ಅವಧಿಯಲ್ಲಿ (13.00 ರಿಂದ 17.00) ಸಂಭವಿಸುತ್ತಿರುವುದು ವರದಿಯಿಂದ ತಿಳಿದು ಬಂದಿರುತ್ತದೆ.

ನಿಗಮದಲ್ಲಿನ ಬಸ್ ಅಪಘಾತಗಳ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ತೀವ್ರ ವಿಷಾದ ವ್ಯಕ್ತಪಡಿಸುತ್ತಾ, ಮತ್ತು ಅಪಘಾತಗಳನ್ನು ನಿಯಂತ್ರಣಗೊಳಿಸುವುದರೊಂದಿಗೆ ಅಪಘಾತ ನಡೆದ ಸಂದರ್ಭದಲ್ಲಿ ಕೆಲವೊಂದು ಅತೀ ಅವಶ್ಯ ಮಾನವೀಯ ವ್ಯವಸ್ಥೆಗಳನ್ನು ಜಾರಿಗೆ ತರುವುದರ ಭಾಗವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ ಬಸ್ಸಿನಲ್ಲಿ ತೀವ್ರ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರುಗಳನ್ನು ಹಾಗೂ ಬಸ್ಸಿನ ಚಾಲಕನನ್ನು ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಅವರನ್ನು ಮತ್ತು ಅವರ ಕುಟುಂಬದವರನ್ನು ಮಾತನಾಡಿಸಿ, ನಿಗಮದ ವತಿಯಿಂದ ಪೂರ್ಣ ಚಿಕಿತ್ಸಾ ವೆಚ್ಚ ಭರಿಸುವ ಭರವಸೆಯನ್ನು ನೀಡಿ, ಗಾಯಾಳುಗಳ ಅನುಕೂಲಕ್ಕಾಗಿ “ಆರೈಕೆ ಕಿಟ್” (ಹಣ್ಣು ಹಂಪಲು, ಸೀರೆ, ಬ್ರೆಡ್, ಬಿಸ್ಕತ್ತು, ಹಾರ್ಲಿಕ್ಸ್ ಹಾಗೂ ಫುಡ್ ಕಿಟ್) ಅನ್ನು ನೀಡಿ ಅವರಿಗೆ ಸಾಂತ್ವನ ಮತ್ತು ಧೈರ್ಯ ತುಂಬಲಾಯಿತು. ಈ ಕಾರ್ಯವನ್ನು ಮುಂದಿನ ದಿನಗಳಲ್ಲಿ ನಿಗಮದ ಎಲ್ಲಾ ವಿʻಭಾಗಗಳಲ್ಲಿಯೂ ಅನುಷ್ಠಾನಗೊಳಿಸುವುದು ಎಂದು ತಿಳಿಸಿದರು.
ಅಪಘಾತಕ್ಕೆ ಪ್ರಮುಖ ಕಾರಣವೆಂದರೆ, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು, ವಾಹನ ಚಾಲನೆ ಮಾಡುವಾಗ, ಮೊಬೈಲ್ನಲ್ಲಿ ಮಾತನಾಡುವುದು, ಏಕಾ-ಏಕಿ ಯಾವುದೇ ಸೂಚನೆಯನ್ನು ನೀಡದೆ ಅಡ್ಡ ರಸ್ತೆಯಿಂದ ಮುಖ್ಯ ರಸ್ತೆಗೆ ಬರುವುದು, ಹೆಚ್ಚಿನ ಸಮಯದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿರುವುದರಿಂದ ಆಗಿದ್ದರೂ ಸಹ, ರಸ್ತೆ ದಾಟುವಾಗ, ಎದುರು ಬರುವ ವಾಹನಗಳ ಬಗ್ಗೆ ನಿರ್ಲಕ್ಷ್ಯತನ, ವೇಗವನ್ನು ಕಡಿತಗೊಳಿಸದೇ ಇರುವುದರಿಂದ ಅಪಘಾತವು ಸಂಭವಿಸುತ್ತಿರುವುದು ಸದರಿ ಕಾರ್ಯಗಾರದಿಂದ ಧೃಡಪಟ್ಟಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ನಿಗಮವು ಕಾಲ-ಕಾಲಕ್ಕೆ ವಾಹನಗಳ ನಿರ್ವಹಣೆಯನ್ನು ಮಾಡುವುದು, ಚಾಲಕರಿಗೆ ವೈಜ್ಞಾನಿಕವಾದ ತರಬೇತಿ ನೀಡುವುದು, ಅತಿವೇಗದ ವಾಹನ ಚಾಲನೆಗೆ ಕಡಿವಾಣ, ಬಸ್ಸಿನ ಚಾಲಕರು ದ್ವಿಚಕ್ರ ಮತ್ತು ಪಾದಚಾರಿಗಳ ಬಗ್ಗೆ ನಿರ್ಲಕ್ಷ್ಯತನ ವಹಿಸುವುನ್ನು ಬಿಟ್ಟು, ಹೆಚ್ಚಿನ ಜಾಗರೂಕತೆಯನ್ನು ವಹಿಸಿ ಚಾಲನೆ ಮಾಡಿ ಅತ್ಯಮೂಲ್ಯ ಜೀವಗಳನ್ನು ಉಳಿಸಿ ,ಸಾವು-ನೋವುಗಳು ಸಂಭವಿಸದ ಹಾಗೆ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.
ಅಪಘಾತಗಳನ್ನು ಕಡಿಮೆಗೊಳಿಸುವುದು ಅನಿವಾರ್ಯವಾಗಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ WRI (World Resource Institute) ರವರಿಗೆ ಈ ಬಗ್ಗೆ ಅಧ್ಯಯನ ನಡೆಸಿ, ವರದಿಯನ್ನು ನೀಡುವಂತೆ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕ ಆಂತೋಣಿ ಜಾರ್ಜ್, ನಿಗಮದ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Join Whatsapp
Exit mobile version