ಬೆಂಗಳೂರು: ತಮ್ಮ ನೋವು ಹೇಳಲು ಬಂದ ಮಹಿಳೆ ಮೇಲೆ ದರ್ಪ ತೋರಿ ಮಹಿಳೆಗೆ ಅವಮಾನ ಮಾಡಿದ ಘಟನೆ ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ತಲತ್ ಯಾಸ್ಮಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಯಾಸ್ಮಿನ್, ಜನರ ಸಂಕಷ್ಟ ಆಲಿಸಿ ಪರಿಹಾರ ಕೊಡುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಅರವಿಂದ್ ಲಿಂಬಾವಳಿ ಬಡ ಮಹಿಳೆಗೆ ನ್ಯಾಯ ಒದಗಿಸುವ ಬದಲು ಆಕೆಯ ಮೇಲೆ ಆಕ್ರೋಶಗೊಂಡಿದ್ದಲ್ಲದೇ ಮಾಧ್ಯಮಗಳ ಮುಂದೆ ನಾನೇನು ಅವಳನ್ನು ರೇಪ್ ಮಾಡಿದ್ದೇನಾ ಎಂದು ಹೇಳಿ ಉದ್ಧಟತನ ತೋರಿದ್ದಾರೆ. ಈ ಅಸಭ್ಯ ವರ್ತನೆಗೆ ಲಿಂಬಾವಳಿ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ತಮ್ಮ ವೈಫಲ್ಯಗಳ ಆಕ್ರೋಶ ಬಡ ಜನರ ಮೇಲೆ ತೆಗೆಯುವುದರ ಬದಲು ತಾಳ್ಮೆಯಿಂದ ಇದ್ದು ಜನರ ಸಮಸ್ಯೆ ಆಲಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರೇಪ್ ನಂತಹ ಪದ ಬಳಿಸಿ ತಮ್ಮ ಸಂಸ್ಕೃತಿಯನ್ನು ತೋರಿಸಿಕೊಂಡಿದ್ದಾರೆ. ಒಂದು ಸಭ್ಯ ಸಮಾಜದಲ್ಲಿ ಈ ರೀತಿ ಬಹಿರಂಗವಾಗಿ ಮಹಿಳೆಗೆ ಅವಮಾನ ಮಾಡಿರುವುದು ಅತ್ಯಂತ ಹೀನಾಯ ಕೃತ್ಯ. ಇವರಿಗೆ ಮಹಿಳೆಯರ ಮೇಲೆ ಗೌರವ ಇದ್ದರೆ ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ವಿಭಾಗದ ಅಧ್ಯಕ್ಷ ತಲತ್ ಯಾಸ್ಮಿನ್ ಆಗ್ರಹಿಸಿದ್ದಾರೆ.