Home ಕ್ರೀಡೆ ಮಹಿಳಾ ಟಿ20 ಏಷ್ಯಾ ಕಪ್‌ನಲ್ಲಿ ಭಾರತ ಶುಭಾರಂಭ| ಲಂಕಾ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ ಬಳಗಕ್ಕೆ ಭರ್ಜರಿ...

ಮಹಿಳಾ ಟಿ20 ಏಷ್ಯಾ ಕಪ್‌ನಲ್ಲಿ ಭಾರತ ಶುಭಾರಂಭ| ಲಂಕಾ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ ಬಳಗಕ್ಕೆ ಭರ್ಜರಿ ಗೆಲುವು

ಬ್ಯಾಟಿಂಗ್‌ನಲಿ ರಾಡ್ರಿಗಸ್‌ ಮತ್ತು ಬೌಲಿಂಗ್‌ನಲ್ಲಿ ಹೇಮಲತಾ ಅವರ ಅಮೋಘ ಪ್ರದರ್ಶನದ ಬಲದಲ್ಲಿ ಮಿಂಚಿದ ಭಾರತೀಯ ಮಹಿಳಾ ತಂಡ, ಏಷ್ಯಾ ಕಪ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಬಾಂಗ್ಲಾದೇಶದ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ, ಶ್ರೀಲಂಕಾ ತಂಡವನ್ನು 41 ರನ್‌ಗಳ ಅಂತರದಲ್ಲಿ ಮಣಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ, ಜೆಮಿಮಾ ರಾಡ್ರಿಗಸ್ ಗಳಿಸಿದ ಅರ್ಧಶತಕ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (33 ರನ್‌) ಉಪಯುಕ್ತ ಬ್ಯಾಟಿಂಗ್‌ ನೆರವಿನಿಂದ 6 ವಿಕೆಟ್‌ ನಷ್ಟದಲ್ಲಿ 150 ರನ್‌ಗಳಿಸಿತ್ತು.

ಚೇಸಿಂಗ್‌ ವೇಳೆ ಭಾರತದ ಬಿಗು ಬೌಲಿಂಗ್‌ ದಾಳಿಗೆ ಸಿಲುಕಿದ ದ್ವೀಪ ರಾಷ್ಟ್ರದ ಬ್ಯಾಟರ್‌ಗಳು, 18.2 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಬೌಲಿಂಗ್‌ನಲ್ಲಿ ಭಾರತದ ಪರ ದಯಾಳನ್‌ ಹೇಮಲತಾ 3 ವಿಕೆಟ್‌ (2.2 ಓವರ್‌, 15 ರನ್‌), ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್‌ ತಲಾ 2 ವಿಕೆಟ್‌ ಪಡೆದು ಮಿಂಚಿದರು.

ಭಾರತದ ಪರ ಇನ್ನಿಂಗ್ಸ್‌ ಆರಂಭಿಸಿದ್ದ ಶೆಫಾಲಿ ವರ್ಮಾ (10 ರನ್‌) ಮತ್ತು ಸ್ಮೃತಿ ಮಂಧಾನ ಆರು ರನ್‌ಗಳಿಸುಷ್ಟರಲ್ಲೇ ವಿಕೆಟ್‌ ಒಪ್ಪಿಸಿದ್ದರು. ಆದರೆ ಆ ಬಳಿಕ ಒಂದಾದ ಜೆಮಿಮಾ ರಾಡ್ರಿಗಸ್ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಅತ್ಯುತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 53 ಎಸೆತಗಳನ್ನು ಎದುರಿಸಿದ ರಾಡ್ರಿಗಸ್‌, 11 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ನೆರವಿನಿಂದ 76 ರನ್‌ಗಳಿಸಿ ಅಟ್ಟಪಟ್ಟು ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು.  ಹರ್ಮನ್‌ಪ್ರೀತ್‌ ಕೌರ್‌ 33 ರನ್‌ ಗಳಿಸಿ ನಿರ್ಗಮಿಸಿದರು. ದಯಾಳನ್‌ ಹೇಮಲತಾ 13 ರನ್‌ಗಳಿಸಿ ಅಜೇಯರಾಗುಳಿದರು.

ಲಂಕಾ ಪರ ಓಷದಿ ರಣಸಿಂಗ್ 32 ರನ್‌ ನೀಡಿ 3 ವಿಕೆಟ್‌ ಪಡೆದರೆ, ಸುಗಂಧಿಕಾ ಕುಮಾರಿ ಮತ್ತು ಚಮರಿ ಅಟ್ಟಪಟ್ಟು ತಲಾ 1 ವಿಕೆಟ್‌ ಪಡೆದರು.

ತಮ್ಮ ಮುಂದಿನ ಪಂದ್ಯದಲ್ಲಿ ಸೋಮವಾರ ಹರ್ಮನ್‌ಪ್ರೀತ್‌ ಕೌರ್‌ ಬಳಗ, ಮಲೇಷ್ಯಾ ತಂಡವನ್ನು ಎದುರಿಸಲಿದೆ.

Join Whatsapp
Exit mobile version