Home ಟಾಪ್ ಸುದ್ದಿಗಳು ಇನ್ಸ್ಟಾಗ್ರಾಮ್: ‘ಸ್ನೇಹ’ ನಂಬಿ 45 ಲಕ್ಷ ಕಳೆದುಕೊಂಡ ಮಹಿಳೆ !

ಇನ್ಸ್ಟಾಗ್ರಾಮ್: ‘ಸ್ನೇಹ’ ನಂಬಿ 45 ಲಕ್ಷ ಕಳೆದುಕೊಂಡ ಮಹಿಳೆ !

ಬೆಂಗಳೂರು: ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ವ್ಯಕ್ತಿಯ ‘ವಜ್ರದ ಉಡುಗೊರೆ’ಯ ಮಾತಿಗೆ ಮರುಳಾಗಿ ಮಹಿಳೆಯೊಬ್ಬರು 45.31 ಲಕ್ಷ ರುಪಾಯಿ ಕಳೆದುಕೊಂಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ವರ್ತೂರು ನಿವಾಸಿಯಾದ ಮಹಿಳೆಗೆ ಇನ್ಸ್ಟಾಗ್ರಾಮ್ ಮೂಲಕ ಅಲೆಕ್ಸ್ ಎರಿನ್ ಎಂಬಾತನ ಪರಿಚಯವಾಗಿತ್ತು. ತಾನು ಅಂತರಾಷ್ಟ್ರೀಯ ಹಡಗಿನಲ್ಲಿ ಕ್ಯಾಪ್ಟನ್ ಆಗಿರುವುದಾಗಿ ಪುಂಗಿ ಬಿಟ್ಟಿದ್ದ. ಇದನ್ನು ನಂಬಿದ ಮಹಿಳೆ, ವಂಚಕ ಅಲೆಕ್ಸ್ ಜೊತೆಗೆ  ಚಾಟಿಂಗ್ ನಡೆಸುತ್ತಿದ್ದಳು.

ನಿಮ್ಮ ಜೊತೆಗಿನ ಸ್ನೇಹದ ನೆನಪಿಗಾಗಿ ಉಡುಗೊರೆ ಕಳುಹಿಸುವುದಾಗಿ ಅಲೆಕ್ಸ್ ಹೇಳಿದ್ದ. ಸೆ.30ರಂದು ಮಹಿಳೆಗೆ ಕರೆ ಮಾಡಿದ್ದ ಮತ್ತೋರ್ವ ವ್ಯಕ್ತಿ, ತಾನು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ವಿದೇಶದಿಂದ ಬೆಲೆ ಬಾಳುವ ಡೈಮಂಡ್ ಉಡುಗೊರೆ ಬಂದಿರುವುದಾಗಿ ಹೇಳಿ ಕಸ್ಟಮ್ಸ್ ಶುಲ್ಕ ಪಾವತಿಸುವಂತೆ ಹೇಳಿದ್ದ. ಈತನ ಮಾತು ನಂಬಿದ ಮಹಿಳೆ, ಆತನ ಖಾತೆಗೆ 45 ಲಕ್ಷದ 31 ಸಾವಿರ ರುಪಾಯಿಯನ್ನು ಪಾವತಿಸಿದ್ದಳು. ಹಣ ಪಾವತಿಯಾಗುತ್ತಲೇ ವಂಚಕರು ಮೊಬೈಲ್ ಫೋನ್ ಸ್ವಿಚ್ ಮಾಡಿ ಪರಾರಿಯಾಗಿದ್ದಾರೆ.

ತಾನು ಮೋಸ ಹೋದ ವಿಚಾರ ಅರಿವಾಗುತ್ತಲೇ ಮಹಿಳೆ ವೈಟ್’ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.ಆರೋಪಿಗಳಾದ ಅಲೆಕ್ಸ್ ಎರಿಕ್, ವೀರ್ ಪಾಲ್, ಬೆನ್ ಹಾಗೂ ಮಥುರಾ ಅನಿವರ್ ಎಂಬುವರ ವಿರುದ್ಧ FIR ದಾಖಲಾಗಿದೆ.

Join Whatsapp
Exit mobile version