ಮಂಗಳೂರು: ಅಗತ್ಯ ವಸ್ತುಗಳ ಬೆಲೆ ನೀತಿ ಖಂಡಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕ್ಲಾಕ್ ಟವರ್ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಆಯಿಶಾ ಬಜ್ಪೆ ನೇತೃತ್ವದಲ್ಲಿ ನಡದ ಪ್ರತಿಭಟನೆಯಲ್ಲಿ, ಬಡವರ ಅನ್ನಕ್ಕೆ ತೆರಿಗೆ ಹಾಕಿದ ಮೋದಿ ಸರಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.
ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಆಯಿಶಾ ಬಜ್ಪೆ ಮಾತನಾಡಿ, ಅಚ್ಛೇ ದಿನ, ಮನ್ ಕಿ ಬಾತ್ ಎಂದು ಜನರನ್ನು ಮರುಳು ಮಾಡಿದ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಜನಸಾಮಾನ್ಯರು ಕಣ್ಣೀರು ಹಾಕುವ ಸ್ಥಿತಿ ತಂದಿದ್ದಾರೆ. ಸ್ವಿಸ್ ಬ್ಯಾಂಕಿನಿಂದ ಹಣ ತರುವುದರಿಂದ ಹಿಡಿದು ಬರೇ ಸುಳ್ಳುಗಳ ಆಡಳಿತ ನಡೆಸುತ್ತಿದ್ದಾರೆ. ಬಡವರ ಹೊಟ್ಟೆಗೆ ಹೊಡೆಯುವ, ಅಂಬಾನಿ ಅದಾನಿ ಅವರಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಸರಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.
ಅನಗತ್ಯವಾಗಿ ಎಲ್ಲದಕ್ಕೂ ಜಿಎಸ್ ಟಿ ಹಾಕಿ ಜನರ ಬದುಕನ್ನು ಬೀದಿಗೆ ದೂಡಿದ ಈ ಸರಕಾರವು ಅತಿಯಾದ ಜಿಎಸ್ ಟಿ ತಗ್ಗಿಸುವವರೆಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ದೇಶದೆಲ್ಲೆಡೆ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದರು.
ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೂ ಜನಸಾಮಾನ್ಯ ಮಹಿಳೆಯರ ಕಷ್ಟ ತಿಳಿಯುತ್ತಿಲ್ಲ. ಬಿಜೆಪಿಯಿಂದ ಅಂಬಾನಿ ಅದಾನಿಗೆ ಅಚ್ಛೇ ದಿನ್ ಬಂದಿದೆ. ನಮಗೆ ಉಪವಾಸ ದಿನ್ ಬಂದಿದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ 40% ಕಮಿಷನ್ ಹೊಡೆದು ಜನರನ್ನು ಸುಲಿಯುವುದು ನಿಲ್ಲಿಸಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲೆ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ವಿಮೆನ್ಸ್ ಫ್ರಂಟ್ ನಾಯಕಿ ಮುಜಾಹಿದಾ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.