Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ಮತ್ತೊಂದು ಭಯಾನಕ ಅತ್ಯಾಚಾರ ಪ್ರಕರಣ | ‘ನಿರ್ಭಯಾ’ ಕೇಸ್ ನ ಭೀಕರತೆ ನೆನಪಿಸಿದ...

ಉತ್ತರ ಪ್ರದೇಶದಲ್ಲಿ ಮತ್ತೊಂದು ಭಯಾನಕ ಅತ್ಯಾಚಾರ ಪ್ರಕರಣ | ‘ನಿರ್ಭಯಾ’ ಕೇಸ್ ನ ಭೀಕರತೆ ನೆನಪಿಸಿದ ರೇಪ್ & ಮರ್ಡರ್

ಲಖನೌ : ಉತ್ತರ ಪ್ರದೇಶದ ಬದೌನ್ ನಲ್ಲಿ ಮತ್ತೊಂದು ಭೀಕರ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ‘ನಿರ್ಭಯಾ’ ಪ್ರಕರಣದ ಭೀಕರತೆಯನ್ನು ನೆನಪಿಸುವಂತೆ ಮಾಡಿದೆ.

ಬದೌನ್ ಜಿಲ್ಲೆಯ ಉಘೈತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಸಂಜೆ ಗ್ರಾಮದ ಮಹಿಳೆಯೊಬ್ಬರು ದೇವಸ್ಥಾನವೊಂದಕ್ಕೆ ತೆರಳಿದ್ದರು. ಆದರೆ, ಆ ಬಳಿಕ ಆಕೆ ಮನೆಗೆ ಹಿಂದಿರುಗಿರಲಿಲ್ಲ.

ರಾತ್ರಿ 12 ಗಂಟೆ ಸುಮಾರಿಗೆ ಆರೋಪಿಗಳಾದ ಮಹಾಂತ್ ಬಾಬಾ ಸತ್ಯಾನಂದ್, ಆತನ ಸಹಚರ ವೇದ್ ರಾಮ್ ಮತ್ತು ಚಾಲಕ ಜಸ್ಪಾಲ್ ರಕ್ತಸ್ರಾವವಾಗುತ್ತಿದ್ದ ಮಹಿಳೆಯನ್ನು ಗ್ರಾಮದಲ್ಲಿ ಬಿಟ್ಟು ಪರಾರಿಯಾಗಿದ್ದರು. ಬಳಿಕ ರಾತ್ರಿ ಮಹಿಳೆ ಸಾವಿಗೀಡಾಗಿದ್ದಾಳೆ. ಇದಕ್ಕೂ ಮೊದಲು ಆರೋಪಿಗಳು ಮಹಿಳೆಯನ್ನು ಚಂದೌಸಿಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದರು ಎಂಬುದು ಬಳಿಕ ಗೊತ್ತಾಗಿದೆ.

ದೂರು ದಾಖಲಾಗಿದ್ದರೂ ಉಘೈತಿ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಪ್ರತಾಪ್ ಸಿಂಗ್ ಗ್ರಾಮಕ್ಕೆ ಬರಲಿಲ್ಲ ಎನ್ನಲಾಗಿದೆ. ಬಳಿಕ ಸೋಮವಾರ ಮಧ್ಯಾಹ್ನದ ವೇಳೆಗೆ ಮೃತದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಮಹಿಳಾ ವೈದ್ಯೆ ಸೇರಿ ಮೂವರು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ.

ಮರಣೋತ್ತರ ಪರೀಕ್ಷೆಯ ವರದಿ ಮಂಗಳವಾರ ಲಭಿಸಿದ್ದು, ಮಹಿಳೆಯ ಪಕ್ಕೆಲುಬು ಮತ್ತು ಕಾಲನ್ನು ಮುರಿಯಲಾಗಿದೆ. ಶ್ವಾಸಕೋಶಕ್ಕೆ ಬಲವಾದ ವಸ್ತುವಿನಿಂದ ದಾಳಿ ಮಾಡಲಾಗಿದೆ. ಮಹಿಳೆಯ ಖಾಸಗಿ ಭಾಗಕ್ಕೆ ಗಂಭೀರ ಹಾನಿ ಮಾಡಲಾಗಿದೆ ಮತ್ತು ಆಕೆಗೆ ತೀವ್ರ ರಕ್ತಸ್ರಾವವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲಾಗಿದೆ. ಉಳಿದ ಇಬ್ಬರ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ.

Join Whatsapp
Exit mobile version