ಮಂಗಳೂರು: ಮಹಾನಗರ ಪಾಲಿಕೆಯಿಂದ ನಡೆಯುತ್ತಿದ್ದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ವೇಳೆ ಮಹಿಳೆಯೋರ್ವಳು ಹೈಡ್ರಾಮ ನಡೆಸಿರುವ ಘಟನೆ ನಗರದ ಮಣ್ಣಗುಡ್ಡ ವಾರ್ಡ್ ನಲ್ಲಿ ಇಂದು ನಡೆದಿದೆ. ಸ್ಥಳೀಯ ನಿವಾಸಿ ವೈಲೇಟ್ ಪಿರೇರಾ ಎಂಬವರು ಕಾಮಗಾರಿ ವೇಳೆ ಈ ಜಾಗ ನನ್ನದು ಎಂದು ತಗಾದೆ ತೆಗೆದಿದ್ದು, ರಸ್ತೆ ಕಾಮಗಾರಿ ತಡೆಯಲು ಯತ್ನಿಸಿದ್ದಾರೆ.
ಕಾಮಗಾರಿಯ ವೇಳೆಯೇ ಛತ್ರಿ ಹಿಡಿದು ಕಾಂಕ್ರೀಟ್ ಹಾಕಿದ ರಸ್ತೆಯ ಮೇಲೆ ಮಲಗಿದ ಮಹಿಳೆ ಸುಮಾರು 2 ಗಂಟೆಗಳ ಕಾಲ ಹಸಿ ಕಾಂಕ್ರೀಟ್ ಮೇಲೆಯೇ ಹೊರಳಾಡಿದ್ದಾರೆ. ಮಹಿಳೆಯ ಮನವೊಲಿಸಲು ಪೊಲೀಸ್ ಅಧಿಕಾರಿಗಳು ಪ್ರಯತ್ನ ನಡೆಸಿದ್ದು ಫಲ ಕಾಣಲಿಲ್ಲ. ಬಳಿಕ 10 ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ಮೂಲಕ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.