ಮುಂಬೈ: ಮುಂಬೈನಲ್ಲಿ ಸ್ಥಾಪಿಸಲಾಗುತ್ತಿರುವ ಜಾಹೀರಾತು ಫಲಕವನ್ನು ವಿರೋಧಿಸಿದ ಆರೋಪದಲ್ಲಿ ಮಹಿಳೆಯೊಬ್ಬರಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ನಾಯಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆಗಸ್ಟ್ 28 ರಂದು ವಿನೋದ್ ಅರ್ಗಿಲೆ ನೇತೃತ್ವದ MNS ಕಾರ್ಯಕರ್ತರು ಪ್ರಚಾರ ಫಲಕಗಳಿಗಾಗಿ ಕಂಬವನ್ನು ಅಳವಡಿಸಿದ್ದನ್ನು ಪ್ರಕಾಶ್ ದೇವಿ ಎಂಬ ಮಹಿಳೆ ಪ್ರಶ್ನಿಸಿದ್ದರು.
ಮುಂಬೈನ ದೇವಿ ಪ್ರದೇಶದಲ್ಲಿ ತನ್ನ ಮೆಡಿಕಲ್ ಸ್ಟೋರ್ ಎದುರು ಬಿದಿರಿನ ಕಂಬಗಳನ್ನು ಹಾಕುತ್ತಿರುವುದನ್ನು ಮಹಿಳೆ ಆಕ್ಷೇಪಿಸಿದ್ದರು. ಇದರಿಂದ ಕೆರಳಿದ MNS ಕಾರ್ಯಕರ್ತರು ತನಗೆ ಹಲ್ಲೆ ನಡೆಸಿದ್ದಾರೆ ಎಂಡು ಸಂತ್ರಸ್ತೆ ದೇವಿ ದೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಆದರೆ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ MNS ಪಕ್ಷ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.