Home ಕರಾವಳಿ ಮಂಗಳೂರು | ಉತ್ತರ ಪ್ರದೇಶದಲ್ಲಿ ಮಹಿಳೆಯ ಗುಂಡಿಕ್ಕಿ ಹತ್ಯೆ; ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಆಗ್ರಹಿಸಿ...

ಮಂಗಳೂರು | ಉತ್ತರ ಪ್ರದೇಶದಲ್ಲಿ ಮಹಿಳೆಯ ಗುಂಡಿಕ್ಕಿ ಹತ್ಯೆ; ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಆಗ್ರಹಿಸಿ NWF ಪ್ರತಿಭಟನೆ

ಮಂಗಳೂರು: ಗೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮಗನ ಬಂಧನವನ್ನು ತಡೆಯಲು ಮುಂದಾದ ರೋಶ್ನಿ ಎಂಬ ಮಹಿಳೆಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ನಡೆಸಿದ ಘಟನೆಯನ್ನು ವಿರೋಧಿಸಿ ನ್ಯಾಷನಲ್ ವಿಮೆನ್ಸ್ ಫ್ರಂಟ್ (NWF) ಇಂದು ಸಂಜೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಹತ್ಯೆಯನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸುವಂತೆ ಅದು ಸರ್ಕಾರವನ್ನು ಆಗ್ರಹಿಸಿದೆ.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎನ್.ಡಬ್ಲ್ಯೂ.ಎಫ್. ಮಾಧ್ಯಮ ಕಾರ್ಯದರ್ಶಿ ರಮ್ಲತ್ ವಾಮಂಜೂರು, ಸಿದ್ಧಾರ್ಥ್ ನಗರ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಪೊಲೀಸರು ನಡೆಸಿದ ಮಹಿಳೆಯ ಬರ್ಬರ ಹತ್ಯೆಯ ಘಟನೆ ತೀವ್ರ ಕಳವಳಕಾರಿಯಾಗಿದೆ. ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಡೆಸಿದರೆನ್ನಲಾದ ಕಾರ್ಯಾಚರಣೆಯ ವೇಳೆ, ತನ್ನ ಮಗನ ಬಂಧನವನ್ನು ತಡೆಯಲು ಪ್ರಯತ್ನಿಸಿದಾಗ ರೋಶ್ನಿ ಎಂಬ ಮಹಿಳೆಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದು ಮೇ ತಿಂಗಳಲ್ಲಿ ನಡೆದ ಎರಡನೇ ಘಟನೆಯಾಗಿದ್ದು, ಇದಕ್ಕೂ ಮೊದಲು ಉತ್ತರ ಪ್ರದೇಶ ಪೊಲೀಸರು ದಾಳಿ ನಡೆಸಿದ ವೇಳೆ ಯಾವುದೋ ಆರೋಪಿಯ ಸಂಬಂಧಿ ಅಥವಾ ಶಂಕಿತನ ಹತ್ಯೆ ನಡೆಸಿದ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಚಂದೌಲಿಯಲ್ಲಿ ಗೂಂಡಾ ಕಾಯ್ದೆ ಹೊಂದಿದ್ದ ಆರೋಪಿಯ ಮಗಳನ್ನು ಥಳಿಸಿ ಕೊಂದ ಆರೋಪವೂ ಪೊಲೀಸರ ಮೇಲಿದೆ ಎಂದು ಕಿಡಿಕಾರಿದ್ದಾರೆ.

ಇಂತಹ ಘಟನೆಗಳು ಆಘಾತಕಾರಿ ಮತ್ತು ಭಯಾನಕವಾಗಿವೆ. ನಾಗರಿಕರ ಪ್ರಾಣ ಮತ್ತು ಸೊತ್ತಿಗೆ ರಕ್ಷಣೆ ಕಲ್ಪಿಸಬೇಕಾಗಿದ್ದ ಪೊಲೀಸ್ ಪಡೆಗಳು ಗೂಂಡಾಗಳಾಗಿ ಮಾರ್ಪಟ್ಟಿರುವುದು ದುರಂತವಾಗಿದೆ. ತಥಾಕಥಿತ ಭಗವಾಧಾರಿ ಸ್ವಾಮಿಯ ನಾಯಕತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶವು ಸರ್ವಾಧಿಕಾರ ಮತ್ತು ಅರಾಜಕತೆಗೆ ಸಾಕ್ಷಿಯಾಗಿದೆ. ನಾಗರಿಕರಿಗೆ ವಿಶೇಷವಾಗಿ ಮಹಿಳೆಯರ ಮತ್ತು ಹುಡುಗಿಯರ ಭದ್ರತೆಯು ಗಂಡಾಂತರಕ್ಕೆ ಸಿಲುಕಿದೆ. ರಾಜ್ಯದಲ್ಲಿ ಅತ್ಯಾಚಾರದ ಪ್ರಕರಣಗಳು ಮತ್ತು ಮಹಿಳೆಯ ಮೇಲಿನ ದಾಳಿಗಳು ಉತ್ತುಂಗಕ್ಕೇರಿದೆ. ಅಪರಾಧಕ್ಕೆ ಅನುಗುಣವಾಗಿ ಜರುಗಿಸುವ ಕಠಿಣ ಶಿಕ್ಷೆಗಳಿಂದ ಮಾತ್ರವೇ ಇಂತಹ ಕೃತ್ಯಗಳನ್ನು ತಡೆಯ ಬಹುದಾಗಿದೆ ಎಂದು ಅವರು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸಾಕೃತ್ಯಗಳು ನಾಗರಿಕರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಕಾನೂನಿನ ಭೀತಿ ಇಲ್ಲದೇ ಹಿಂಸಾಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಸಮಾಜ ವಿರೋಧಿ ಶಕ್ತಿಗಳು ಮತ್ತು ಪೊಲೀಸರನ್ನು ಕಠಿಣ ಕ್ರಮಕ್ಕೆ ಒಳಪಡಿಸಬೇಕು. ಮಹಿಳೆಯ ಬರ್ಬರ ಹತ್ಯೆ ಘಟನೆಗೆ ಸಂಬಂಧಿಸಿ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ಸಂತ್ರಸ್ತ ಜನತೆಗೆ ಸೂಕ್ತ ಪರಿಹಾರವನ್ನು ಕಲ್ಪಿಸಬೇಕು. ಮಹಿಳೆಯರ ರಕ್ಷಣೆಯನ್ನು ಖಾತರಿಪಡಿಸುವುದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಉತ್ತರ ಪ್ರದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿರುವ ನಿಟ್ಟಿನಲ್ಲಿ ರಾಷ್ಟ್ರಪತಿಯವರು ಕೂಡಲೇ ಮಧ್ಯ ಪ್ರವೇಶ ಮಾಡಬೇಕೆಂದು ಅವರು ಸಾಂದರ್ಭಿಕವಾಗಿ ಆಗ್ರಹಿಸಿದರು.

ಈ ಪ್ರತಿಭಟನಾ ಸಭೆಯಲ್ಲಿ NWF ಕರ್ನಾಟಕ ರಾಜ್ಯಾಧ್ಯಕ್ಷೆ ಫರ್ಝಾನ, ಅಫ್ರೀನ್ ಬಂಟ್ವಾಳ, ಮಿಡಿತ ಪತ್ರಿಕೆಯ ಉಪಸಂಪಾದಕಿ ಮುಜಾಹಿದಾ, ವಿದ್ಯಾರ್ಥಿ ನಾಯಕಿಯರಾದ ಸಹಲಾ ಮತ್ತು ಗೌಸಿಯಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Join Whatsapp
Exit mobile version