ಮಂಗಳೂರು: ಜಾಮೀನು ನೀಡುವ ವಿಚಾರವಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ಮಹಿಳಾ ವಕೀಲೆಯೊಬ್ಬರಿಗೆ ನಿಂದಿಸಿ, ಜೀವ ಬೆದರಿಕೆ ಒಡ್ಡಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಆರೋಪಿ ಹಮೀದ್ ಕಾವೂರು ಯಾನೆ ಮುಹಮ್ಮದ್ ಹನೀಫ್ ಎಂಬಾತನೇ ವಕೀಲೆಯನ್ನು ಬೆದರಿಸಿ ಅವಾಚ್ಯವಾಗಿ ನಿಂದಿಸಿದ್ದಾಗಿ ತಿಳಿದು ಬಂದಿದೆ.
ಕೋರ್ಟ್ ಆವರಣದಲ್ಲಿದ್ದ ವೇಳೆ ವಕೀಲೆ ರುಬಿಯಾ ಅಖ್ತರ್ ಅವರ ಬಳಿ ತೆರಳಿದ ಆರೋಪಿ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದ್ದಾನೆ ಎನ್ನಲಾಗಿದೆ. ‘‘ನಾನು ಬೇಕಾದಷ್ಟು ಜನರಿಗೆ ಜಾಮೀನು ನೀಡಿದ್ದೇನೆ. ನೀನು ಯಾವ ಲೆಕ್ಕದ ವಕೀಲೆ. ನನ್ನ ಜಾಮೀನನ್ನು ಕೋರ್ಟ್ ಗೆ ನೀಡಲು ಒಪ್ಪದಿದ್ದರೆ, ನಿನ್ನನ್ನು ಕೋರ್ಟ್ ಬಾರದ ಹಾಗೆ ಮಾಡುವೆನು. ನಿನ್ನ ಕೈ ಕಾಲು ಪುಡಿ ಮಾಡುವೆನು. ನಿನಗೆ ಬುದ್ಧಿ ಕಲಿಸುವೆನು ಎಂದು ಕೆಲ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸಿದ್ದಾಗಿ ವಕೀಲೆ ಆರೋಪಿಸಿದ್ದಾರೆ.
ಈ ಕುರಿತು ವಕೀಲೆ ರುಬಿಯಾ ಅಖ್ತರ್ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ಆರೋಪಿ ಹಮೀದ್ ಯಾನೆ ಹನೀಫ್ ವಿರುದ್ಧ ಭಾರತೀಯ ದಂಡ ಸಂಹಿತೆ 354, 504, 506 ಸೆಕ್ಷನ್ ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.