ಕೋರುಟ್ಲ : ಗಂಡ ಮೃತಪಟ್ಟಾಗ ಆತನ ಮೃತದೇಹದ ಅಂತ್ಯ ಸಂಸ್ಕಾರ ಮಾಡಬೇಕಿದ್ದ ಪತ್ನಿಯರಿಬ್ಬರು ಮೃತದೇಹವನ್ನು ಮನೆಯಲ್ಲೇ ಬಿಟ್ಟು, ಆಸ್ತಿಗಾಗಿ ತಹಶೀಲ್ದಾರ್ ಕಚೇರಿಗೆ ದೌಡಾಯಿಸಿದ ಘಟನೆ ತಮಿಳುನಾಡಿನ ಕೋರುಟ್ಲ ತಾಲೂಕಿನ ಐಲಾಪೂರ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ನರಸಿಂಹುಲು ಕೆಲ ದಿನಗಳಿಂದ ಕೋರುಟ್ಲದಲ್ಲಿ ವಾಸವಾಗಿದ್ದರು. ಅವರಿಗೆ ಇಬ್ಬರು ಹೆಂಡತಿಯರು. ನರಸಿಂಹುಲು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿವಿಧಾನಗಳನ್ನು ಪತ್ನಿಯರಿಬ್ಬರು ಒಂದಾಗಿ ನೆರವೇರಿಸಬೇಕಾಗಿತ್ತು. ಆದರೆ ಆಸ್ತಿಯ ಪಾಲಿಗಾಗಿ ಇಬ್ಬರು ಹೆಂಡತಿಯರು ಮೃತದೇಹದ ಮುಂದೆ ಜಗಳವಾಡಿದ್ದಾರೆ. ಪತಿಯ ಆಸ್ತಿ ಹಸ್ತಾಂತರ ವಿಷಯದಲ್ಲಿ ಎರಡನೇ ಪತ್ನಿ ಭಾರತಿಗೆ ಅನ್ಯಾಯವಾಗಲಿದೆ ಎಂಬ ಉದ್ದೇಶದಿಂದ ಇಬ್ಬರ ಪರವಾಗಿ ಹಿರಿಯರು, ಸಂಬಂಧಿಕರು ಮಧ್ಯಪ್ರವೇಶಿಸಿ ಮೂರು ಎಕರೆ ಕೃಷಿ ಭೂಮಿ ಕೊಡಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೂ ಇದು ಇಲ್ಲಿಗೆ ಮುಗಿಯಲಿಲ್ಲ. ಜಮೀನು ನೋಂದಣಿಯಾಗುವವರೆಗೆ ಅಂತ್ಯಕ್ರಿಯೆ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಭಾರತಿ ಹಠ ಹಿಡಿದರು.
ಹೀಗಾಗಿ ಅವರಿಬ್ಬರು ತಮ್ಮ ಗಂಡನ ಮೃತದೇಹವನ್ನು ಮನೆಯಲ್ಲೇ ಬಿಟ್ಟು ಆಸ್ತಿ ನೋಂದಣಿಗಾಗಿ ತಹಶೀಲ್ದಾರ್ ಕಚೇರಿಗೆ ತೆರಳಿದ್ದಾರೆ. ವಿಷಯ ಕೇಳಿ ತಹಶೀಲ್ದಾರ್ ಹೌಹಾರಿದ್ದಾರೆ.