Home ಟಾಪ್ ಸುದ್ದಿಗಳು ಡಿಸೆಂಬರ್ 7ರಿಂದ 29ರವರೆಗೆ ಚಳಿಗಾಲದ ಸಂಸತ್ ಅಧಿವೇಶನ

ಡಿಸೆಂಬರ್ 7ರಿಂದ 29ರವರೆಗೆ ಚಳಿಗಾಲದ ಸಂಸತ್ ಅಧಿವೇಶನ

ನವದೆಹಲಿ: ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನವು ಡಿಸೆಂಬರ್ 7ರಿಂದ 29ರವರೆಗೆ 23 ದಿನಗಳ ಕಾಲ ನಡೆಯಲಿದ್ದು, ಆ ಬಗ್ಗೆ ಸುತ್ತೋಲೆ ಹೊರಡಿಸಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಈ ಚಳಿಗಾಲದ ಅಧಿವೇಶನದಲ್ಲಿ ಒಟ್ಟು 17 ಕೆಲಸದ ದಿನಗಳು ಇರುತ್ತವೆ.

ಡಿಸೆಂಬರ್ 7ರಿಂದ 29ರವರೆಗಿನ ಈ ಚಳಿಗಾಲದ ಅಧಿವೇಶನದಲ್ಲಿ 17 ಕಲಾಪಗಳು ಅರ್ಥಾತ್ ಸದನ ಸೇರುವಿಕೆಗಳು ಇರುತ್ತವೆ. ಚಳಿಗಾಲದ ಅಧಿವೇಶನದಲ್ಲಿ ರಚನಾತ್ಮಕ ಚರ್ಚೆ ಆಗಲಿ ಎಂದು ಜೋಷಿ ಟ್ವೀಟ್ ಮಾಡಿದ್ದಾರೆ.

ಮೊದಲ ದಿನದಲ್ಲಿ ಇತ್ತೀಚೆಗೆ ಮೃತಪಟ್ಟ ಹಾಲಿ ಸಂಸದರಿಗೆ ಗೌರವ ಸಮರ್ಪಣೆ ನಡೆಯಲಿದೆ. ಒಂದು ನಿಮಿಷದ ಮೌನ ಪ್ರಾರ್ಥನೆಯ ಬಳಿಕ ಕಲಾಪ ಮುಂದೂಡಲ್ಪಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಹಾಲಿ ಸಂಸದರಲ್ಲಿ ಇತ್ತೀಚೆಗೆ ಮೃತಪಟ್ಟವರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದ ಮುಲಾಯಂ ಸಿಂಗ್ ಯಾದವ್ ಪ್ರಮುಖರು.

ಕೋವಿಡ್ ಕಾಲದ ನಿರ್ಬಂಧಗಳು ಈ ಬಾರಿ ಇರಲಾರದು. ಜನಪ್ರತಿನಿಧಿಗಳಲ್ಲಿ ಸದ್ಯ ಕೋವಿಡ್ ಬಾಧಿತರು ಯಾರೂ ಇಲ್ಲ. ಅವರ ಸಹಿತ ಸಂಸತ್ತಿನ ಎಲ್ಲ ಸಿಬ್ಬಂದಿ, ಅಧಿಕಾರಿಗಳೆಲ್ಲ ಲಸಿಕೆ ಹಾಕಿಸಿಕೊಂಡವರೇ ಆಗಿದ್ದಾರೆ.

ಹೊಸದಾಗಿ ಉಪ ರಾಷ್ಟ್ರಪತಿ ಆಗಿರುವ ಜಗದೀಪ್ ದನ್ಕರ್ ಮೊದಲ ಬಾರಿಗೆ ರಾಜ್ಯ ಸಭೆಯ ಕಲಾಪಗಳನ್ನು ಸಭಾಪತಿಯಾಗಿ ಮುನ್ನಡೆಸುವರು. ಸರಕಾರವು ಹಲವು ಮಸೂದೆಗಳನ್ನು ಮಂಡಿಸಲು ತಯಾರಿ ಮಾಡಿಕೊಂಡಿದೆ. ಸೂಕ್ತ ವಿಷಯದಲ್ಲಿ ಚರ್ಚೆ ನಡೆಸುವಂತೆ ಪ್ರತಿ ಪಕ್ಷಗಳವರಿಗೆ ಮನವಿ ಮಾಡಲಾಗಿದೆ.

ಈ ಬಾರಿಯ ಮುಂಗಾರು ಅಧಿವೇಶನವು ಜು. 18ರಂದು ಆರಂಭವಾಗಿ, ಆಗಸ್ಟ್ 8ರಂದು ಮುಂದೂಡಲ್ಪಟ್ಟಿತು. 22 ದಿನಗಳ ಕಾಲದಲ್ಲಿ 16 ಸಭಾ ಕಲಾಪ ದಿನಗಳು ನಡೆದಿದ್ದವು. 6 ಮಸೂದೆಗಳನ್ನು ಮಂಡಿಸಲಾಯಿತು. ಲೋಕಸಭೆಯಲ್ಲಿ 7 ಮತ್ತು ರಾಜ್ಯ ಸಭೆಯಲ್ಲಿ 5 ಮಸೂದೆಗಳು ಪಾಸಾದವು. ಎರಡೂ ಮನೆಗಳಲ್ಲಿ ಪಾಸಾದ ಮಸೂದೆಗಳು 5.

ಮುಂಗಾರು ಅಧಿವೇಶನದಲ್ಲಿ ಬೆಲೆಯೇರಿಕೆಯ ಸಹಿತ ಕೆಲವು ಕಡಿಮೆ ಕಾಲದ ಚರ್ಚೆಗಳಷ್ಟೆ ನಡೆದವು. ಆಗ ಲೋಕಸಭೆಯ ಉತ್ಪಾದಕತೆ 48% ಇದ್ದರೆ ರಾಜ್ಯಸಭೆಯದು 44% ಮಾತ್ರ ಇತ್ತು. ಇಲ್ಲಿ ಉತ್ಪಾದಕತೆ ಎನ್ನುವುದು ಕಾಲದ ಬಳಕೆಯ ಉಪಯುಕ್ತತೆ.

Join Whatsapp
Exit mobile version