ವಿಂಬಲ್ಡನ್‌ನಲ್ಲಿ ಭಾರತದ ಏಕೈಕ ಭರವಸೆಯಾಗಿರುವ ಸಾನಿಯಾ ಮಿರ್ಜಾ, ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ರೋವೇಷಿಯಾದ ಮೇಟ್ ಪಾವಿಕ್ ಜೊತೆಗೂಡಿ ಆಡುತ್ತಿರುವ ಸಾನಿಯಾ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಕೆನಡಿಯನ್- ಆಸ್ಟ್ರೇಲಿಯನ್ ಜೋಡಿ ಗೇಬ್ರಿಯೆಲಾ ಡಬ್ರೋವ್ಸ್ಕಿ ಮತ್ತು ಜಾನ್ ಪೀರ್ಸ್ ವಿರುದ್ಧ 6-4, 3-6, 7-5 ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ರಾಬರ್ಟ್ ಫರಾ ಮತ್ತು ಜೆಲೆನಾ ಒಸ್ಟಾಪೆಂಕೊ ಸವಾಲನ್ನು ಮಿರ್ಜಾ- ಪಾವಿಕ್ ಜೋಡಿ ಎದುರಿಸಲಿದ್ದಾರೆ. ಇದಕ್ಕೂ ಮೊದಲು ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸಾನಿಯಾ ಸೋಲು ಕಂಡಿದ್ದರು. ಜೆಕ್ ಗಣರಾಜ್ಯದ ಲೂಸಿ ಪ್ರಜೆಕ್ಕಾ ಜೊತೆಗೂಡಿ ಕಣಕ್ಕಿಳಿದಿದ್ದ ಸಾನಿಯಾ, ಫ್ರೆಚ್ ಮತ್ತು ಬೀಟ್ರೋಜ್ ಜೋಡಿ ಎದುರು ಮೂರು ಸೆಟ್‌ಗಳ ಹೋರಾಟದಲ್ಲಿ ಶರಣಾಗಿತ್ತು. 2015ರಲ್ಲಿ ದಿಗ್ಗಜ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜೊತೆ ಮಹಿಳೆಯರ ಮಿಕ್ಸೆಡ್ ಡಬಲ್ಸ್ ಆಡಿದ್ದ ಸಾನಿಯಾ, ತಮ್ಮ ಚೊಚ್ಚಲ ಪ್ರಶಸ್ತಿ ಗೆದ್ದಿದ್ದರು.
ಕ್ವಾರ್ಟರ್ ಫೈನಲ್ ತಲುಪಿದ ರಾಫೆಲ್ ನಡಾಲ್
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿರುವ ಸ್ಪೇನ್‌ನ್ ರಾಫೆಲ್ ನಡಾಲ್, ಕ್ವಾರ್ಟರ್ ಫೈನಲ್ ತಲುಪಿದ್ದಾರೆ. 16ರ ಸುತ್ತಿನ ಪಂದ್ಯದಲ್ಲಿ ನಡಾಲ್, ಡಚ್ ಆಟಗಾರ ಬೊಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್ ವಿರುದ್ಧ 6-4, 6-2, 7-6(6) ಅಂತರದಲ್ಲಿ ಗೆಲುವು ಸಾಧಿಸಿದರು. 2019ರ ಬಳಿಕ ಇದೇ ಮೊದಲ ಬಾರಿಗೆ ವಿಂಬಲ್ಡನ್ ಟೂರ್ನಿಯಲ್ಲಿ ಆಡುತ್ತಿರುವ ನಡಾಲ್, ಮುಂದಿನ ಸುತ್ತಿನಲ್ಲಿ ಅಮೆರಿಕದ 11ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರನ್ನು ಎದುರಿಸಲಿದ್ದು, ಆ ಪಂದ್ಯದಲ್ಲಿ ಗೆದ್ದರೆ, ಶುಕ್ರವಾರ ನಡೆಯುವ ಸೆಮಿಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿದ್ದಾರೆ.