Home ಟಾಪ್ ಸುದ್ದಿಗಳು ಗಾಂಧೀಜಿಯ ಮದ್ಯಪಾನ ನಿರ್ಮೂಲನೆಯ ನಿಲುವಿಗೆ ಅಪಚಾರ ವೆಸಗುವ ಕರ್ನಾಟಕ ರಾಜ್ಯ ಸರಕಾರಕ್ಕೆ ಗಾಂಧಿ ಜಯಂತಿ ಆಚರಿಸುವ...

ಗಾಂಧೀಜಿಯ ಮದ್ಯಪಾನ ನಿರ್ಮೂಲನೆಯ ನಿಲುವಿಗೆ ಅಪಚಾರ ವೆಸಗುವ ಕರ್ನಾಟಕ ರಾಜ್ಯ ಸರಕಾರಕ್ಕೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ: ವಿಮೆನ್ ಇಂಡಿಯಾ ಮೂವ್ಮೇಂಟ್

ಬೆಂಗಳೂರು: ಅಪರಾಧಗಳ ಮೂಲ, ಆರೋಗ್ಯಕ್ಕೆ ಹಾನಿಕಾರಕ, ಆರ್ಥಿಕ ಹಿನ್ನೆಡೆಗೆ ಹಾಗೂ ಸಂಪನ್ಮೂಲಗಳ ದುರ್ಬಳಕೆಗೆ ಹೇತುವಾಗಿರುವ ಮದ್ಯವನ್ನು ಸಂಪೂರ್ಣ ನಿರ್ಮೂಲನೆಗೊಳಿಸುವ ಕನಸು ಕಂಡ ಗಾಂಧೀಜಿಯ ಹುಟ್ಟುಹಬ್ಬ ಆಚರಿಸಲು ಕರ್ನಾಟಕ ರಾಜ್ಯ ಸರಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ತಿಳಿಸಿದ್ದಾರೆ.

ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿಗಳು ಇಲ್ಲ ಎಂಬ ಎಂದು ಅಬಕಾರಿ ಸಚಿವ ಆರ್. ಬಿ.ತಿಮ್ಮಾಪುರ ಹೇಳಿಕೆ ನೀಡಿದ್ದು ಪ್ರತಿ ಗ್ರಾಮವೊಂದಕ್ಕೆ ಸರಕಾರ ಸಾವಿರ ಮದ್ಯದ ಅಂಗಡಿ ತೆರೆಯುವ ಚಿಂತನೆ ನಡೆಸುತ್ತಿದೆ. ಅಂತೆಯೇ ಸೂಪರ್ ಮಾರ್ಕೆಟ್ ಮಾಲ್ ಗಳಲ್ಲೂ ಮದ್ಯದ ಅಂಗಡಿ ತೆರೆಯಲು ಪರವಾನಿಗೆ ನೀಡಲಿದೆ.

ಮದ್ಯಪಾನದ ದುಷ್ಪರಿಣಾಮವನ್ನು ಅತ್ಯಂತ ಹೆಚ್ಚು ಎದುರಿಸುತ್ತಿರುವವರು ಮಹಿಳೆಯರಾಗಿದ್ದಾರೆ. ಆದ್ದರಿಂದಲೇ ಮದ್ಯಪಾನ ನಿರ್ಮೂಲನೆಯ ಹೋರಾಟದಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಇರುತ್ತಾರೆ.

ಕುಡುಕರು ಮದ್ಯಪಾನಕ್ಕೆ ದಾಸರಾಗಿ, ವಿವೇಚನೆ ಕಳೆದುಕೊಂಡು, ಅಪರಾಧ ಕೃತಿಗಳಲ್ಲಿ ಭಾಗಿಯಾಗಿ, ಆರೋಗ್ಯ ಕೆಡಿಸುತ್ತಿರುವುದರಿಂದಾಗಿ ಅವರ ಕುಟುಂಬ ಘನತೆಯ ಜೀವನ, ಉತ್ತಮ ಸವಲತ್ತುಗಳನ್ನು ಹಾಗೂ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದೀಗ ಗೃಹಲಕ್ಷ್ಮಿ ಮೂಲಕ 2000 ರೂಪಾಯಿ ನೀಡಿ ಅದರ ದುಪ್ಪಟ್ಟನ್ನು ಮದ್ಯದ ಮೂಲಕ ಕಿತ್ತುಕೊಳ್ಳುವ ಸರಕಾರದ ದ್ವಂದ್ವ ನಿಲುವು ವಂಚನಾತ್ಮಕವಾಗಿದೆ.
ಯುವ ಜನಾಂಗವನ್ನು, ಸಾರ್ವಜನಿಕರನ್ನು ಮದ್ಯಪಾನದ ಚಟಕ್ಕೆ ಬಲಿಯಾಗದಂತೆ ಹಾಗೂ ಚಟ ಬಿಡಿಸುವಂತೆ ಯೋಜನೆ ರೂಪಿಸಬೇಕಾಗಿದ್ದ ಸರಕಾರ, ಜನವಿರೋಧಿಯಾಗಿ ,ಮಹಿಳಾ ವಿರೋಧಿಯಾಗಿ ಅದಕ್ಕಿಂತಲೂ ಮಿಗಿಲಾಗಿ ಗಾಂಧಿ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು ಅಕ್ಷಮ್ಯ.
ಇಂತಹ ಸರಕಾರಕ್ಕೆ ಗಾಂಧಿ ಜಯಂತಿಯನ್ನು ಆಚರಿಸಲು ತೀರಾ ನೈತಿಕತೆ ಇಲ್ಲ ಎಂದು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version