Home ಕರಾವಳಿ ಮಂಗಳೂರು: ಬಿಹಾರದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಖಂಡಿಸಿ ವಿಮೆನ್ ಇಂಡಿಯಾದಿಂದ ಪ್ರತಿಭಟನೆ

ಮಂಗಳೂರು: ಬಿಹಾರದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಖಂಡಿಸಿ ವಿಮೆನ್ ಇಂಡಿಯಾದಿಂದ ಪ್ರತಿಭಟನೆ

ಮಂಗಳೂರು: ಬಿಹಾರದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.


ಪ್ರತಿಭಟನೆ ಉದ್ದೇಶಿಸಿ ವಿಮ್ ದ.ಕ. ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ, ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಏರಿಕೆಗೆ ಆಡಳಿತ ವರ್ಗವೇ ಕಾರಣ. ಹತ್ರಾಸ್ ನಲ್ಲಿ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ನಡೆದಾಗ ಆಕೆಯ ಶವವನ್ನು ಕುಟುಂಬಿಕರಿಗೂ ತೋರಿಸದೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಸರಕಾರ ಅತ್ಯಾಚಾರಿಗಳನ್ನು ಪೋಷಿಸುತ್ತಾ ಇದೆ. ಕೆಲವೊಂದು ಮನುವಾದಿ ಮನೋಸ್ಥಿತಿಯ ಪೊಲೀಸ್ ಅಧಿಕಾರಿಗಳಿಂದ ನೈಜ ಆರೋಪಿಗಳ ಬಂಧನವಾಗುತ್ತಿಲ್ಲ ಎಂದು ಟೀಕಿಸಿದರು.


ದೇಶದಲ್ಲಿ ಒಂದು ಸಮುದಾಯವನ್ನು ಮತ್ತು ಆ ಸಮುದಾಯದ ಹೆಣ್ಮಕ್ಕಳನ್ನು ಗುರಿಯಾಗಿಸಲಾಗುತ್ತಿದೆ. ಸರಕಾರ ಹೆಣ್ಮಕ್ಕಳಿಗೆ ರಕ್ಷಣೆ ಕೊಡಲು ಮುಂದಾಗಲಿ, ಇಲ್ಲದಿದ್ದರೆ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಮಹಿಳೆಯರಿಗೆ ರಕ್ಷಣೆ ನೀಡಲಾಗದಿರುವ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದರು.


ವಿಮ್ ಬಂಟ್ವಾಳ ತಾಲೂಕು ಅಧ್ಯಕ್ಷೆ ಶಾಕಿರಾ ಮಾತನಾಡಿ, ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಸಂತ್ರಸ್ತೆಯರು ದೂರು ನೀಡಿದರೂ ಕ್ರಮಗಳಾಗುತ್ತಿಲ್ಲ. ಪ್ರಕರಣಗಳ ಸಂಖ್ಯೆ ಅಧಿಕವಾದರೂ, ತಪ್ಪಿತಸ್ಥರಿಗೆ ಆಗುವ ಶಿಕ್ಷೆ ಪ್ರಮಾಣ ಕಡಿಮೆಯದ್ದಾಗಿದೆ ಎಂದರು. ಅಲ್ಲದೇ, ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯ ನಡೆದಲ್ಲಿ ವಹಿಸಬೇಕಾದ ಕ್ರಮಗಳೇನು ಎನ್ನುವುದರ ಬಗ್ಗೆ ವಿವರಿಸಿದರು.
ಪ್ರತಿಭಟನೆಯಲ್ಲಿ ವಿಮ್ ಜಿಲ್ಲಾ ಕಾರ್ಯದರ್ಶಿ ಝಹಾನ ಬಂಟ್ವಾಳ, SDPI ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ವಿದ್ಯಾರ್ಥಿ ನಾಯಕಿ ಇಫ್ರತ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version