Home ಕ್ರೀಡೆ ಕ್ಯಾಚ್ ಕೈಬಿಟ್ಟ ಎಸೆತದಲ್ಲಿ 7 ರನ್ ಬಿಟ್ಟುಕೊಟ್ಟ ಬಾಂಗ್ಲಾದೇಶ !

ಕ್ಯಾಚ್ ಕೈಬಿಟ್ಟ ಎಸೆತದಲ್ಲಿ 7 ರನ್ ಬಿಟ್ಟುಕೊಟ್ಟ ಬಾಂಗ್ಲಾದೇಶ !

ಕ್ರೈಸ್ಟ್’ಚರ್ಚ್: ನ್ಯೂಜಿಲೆಂಡ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಹುಮ್ಮಸ್ಸಿನಲ್ಲಿರುವ ಬಾಂಗ್ಲಾದೇಶ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿನ ಸುಳಿಯಲ್ಲಿ ಸಿಲುಕಿದೆ. ಕ್ರೈಸ್ಟ್’ಚರ್ಚ್’ನ  ಹ್ಯಾಗ್ಲೀ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್’ನಲ್ಲಿ 521 ರನ್‌ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್‌ ಮಾಡಿಕೊಂಡಿತು. ಬಳಿಕ ಬ್ಯಾಟಿಂಗ್’ಗಿಳಿದ ಬಾಂಗ್ಲಾದೇಶ, ಟ್ರೆಂಟ್ ಬೌಲ್ಟ್ ಬಿಗು ಬೌಲಿಂಗ್ ದಾಳಿಯನ್ನು  ಎದುರಿಸಲಾಗದೆ 41.2 ಓವರ್‌ಗಳಲ್ಲಿ ಕೇವಲ 126 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಈ ಮೂಲಕ ಮೊಯಿನುಲ್ ಹಕ್ ಪಡೆ 395 ರನ್‌’ಗಳ ಹಿನ್ನೆಡೆ ಅನುಭವಿಸಿದೆ.

ಒಂದೇ ಎಸೆತದಲ್ಲಿ 7 ರನ್..!

ಕ್ರಿಕೆಟ್’ನಲ್ಲಿ ಅತ್ಯಂತ ಅಪರೂಪದ ಘಟನೆಯೊಂದಕ್ಕೆ ಕಿವೀಸ್-ಬಾಂಗ್ಲಾ ನಡುವಿನ ಎರಡನೇ ಟೆಸ್ಟ್ ಸಾಕ್ಷಿಯಾಯಿತು. ಸಿಕ್ಸರ್ ಇಲ್ಲದೆಯೇ ಒಂದೇ ಎಸೆತದಲ್ಲಿ 7 ರನ್ ಬಿಟ್ಟುಕೊಡುವುದರ ಜೊತೆಗೆ ಕ್ಯಾಚ್ ಕೂಡ ಕೈಚೆಲ್ಲಿ ಬಾಂಗ್ಲಾದೇಶ ತೀವ್ರ ನಿರಾಸೆ ಅನುಭವಿಸಿತು. ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ 26ನೇ ಓವರ್’ನಲ್ಲಿ, ಫೀಲ್ಡಿಂಗ್ ವೈಫ್ಯಲ್ಯದ ಕಾರಣ ಬೌಲರ್ ಇಬಾದತ್ ಹುಸೈನ್ ವಿಕೆಟ್ ವಂಚಿತರಾಗುವುದರ ಜೊತೆಗೆ 7 ರನ್ ಬಿಟ್ಟುಕೊಟ್ಟ ಅಪಖ್ಯಾತಿಗೂ ಒಳಗಾದರು. ವೇಗಿ ಇಬಾದತ್ ಹುಸೈನ್ ಎಸೆತವನ್ನು ಅಂದಾಜಿಸಲು ವಿಫಲರಾದ ಆರಂಭಿಕ ಆಟಗಾರ ವಿಲ್ ಯಂಗ್ ಬ್ಯಾಟ್’ನಿಂದ ಎಡ್ಜ್ ಆದ ಚೆಂಡು ಸ್ಲಿಪ್’ನಲ್ಲಿ ಕ್ಯಾಚ್ ಆಗಿತ್ತು. ಆದರೆ ಫೀಲ್ಡರ್ ಕ್ಯಾಚ್ ಚೈಲ್ಲಿದ ಪರಿಣಾಮ ಚೆಂಡು ಬೌಂಡರಿಯತ್ತ ಧಾವಿಸಿತ್ತು. ಬೌಂಡರಿ ತಡೆಯಲು ಫೀಲ್ಡರ್ ಯಶಸ್ವಿಯಾದರೂ ಅದಾಗಲೇ ಲಾಥಮ್-ಯಂಗ್ ಜೋಡಿ ಮೂರು ರನ್ ಪೂರ್ತಿಗೊಳಿಸಿದ್ದರು. ಫೀಲ್ಡರ್’ನಿಂದ ಚೆಂಡು ಪಡೆದ ವಿಕೆಟ್ ಕೀಪರ್ ನೂರುಲ್ ಹಸನ್ ನಾನ್ ಸ್ಟ್ರೈಕರ್’ನತ್ತ ಎಸೆದರು. ಆದರೆ ಚೆಂಡು ವಿಕೆಟ್’ಗೆ ತಾಗದ ಕಾರಣ ನೇರವಾಗಿ ಬೌಂಡರಿ ಗೆರೆ ದಾಟಿತು. ಬೌಂಡರಿ ತಡೆಯಲು ಬೌಲರ್ ಇಬಾದತ್ ಹುಸೈನ್ ಪ್ರಯತ್ನಿಸಿದರೂ ಫಲ ನೀಡಲಿಲ್ಲ.  ಹೀಗಾಗಿ 3+4 ಒಟ್ಟು 7 ರನ್ ಒಂದೇ ಎಸೆತದಲ್ಲಿ ದಾಖಲಾಯಿತು.

ಟಾಮ್ ಲಾಥಮ್ ಭರ್ಜರಿ ದ್ವಿಶತಕ !  


ನ್ಯೂಜಿಲೆಂಡ್‌ ತಂಡದ ನಾಯಕ ಟಾಮ್‌ ಲೇಥಮ್‌ ಭರ್ಜರಿ ದ್ವಿಶತಕ ದಾಖಲಿಸಿ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. 373 ಎಸೆತಗಳನ್ನು ಎದುರಿಸಿದ ಲಾಥಮ್, 34 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 252 ರನ್’ಗಳಿಸಿ ಮೊಮಿನುಲ್ ಹಖ್’ಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ವಿಲ್ ಯಂಗ್ 54 ರನ್’ಗಳಿಸಿ ಔಟಾದರು. ಡೈನ್ ಕಾನ್ವೆ ಆಕರ್ಷಕ ಶತಕ  (109) ದಾಖಲಿಸಿದರೆ, ಬೌಲಿಂಗ್’ನಲ್ಲಿ ಟ್ರೆಂಟ್ ಬೌಲ್ಟ್ 13.2 ಓವರ್’ಗಳ ದಾಳಿಯಲ್ಲಿ 43 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಮಿಂಚಿದರು.

Join Whatsapp
Exit mobile version