Home ಕರಾವಳಿ ಮುಟ್ಟುಗೋಲು ಹಾಕಿರುವ ಹಣವನ್ನು ಕಾನೂನು ಬದ್ಧವಾಗಿಯೇ ಹಿಂಪಡೆಯುತ್ತೇವೆ: ಇಜಾಝ್ ಅಹ್ಮದ್

ಮುಟ್ಟುಗೋಲು ಹಾಕಿರುವ ಹಣವನ್ನು ಕಾನೂನು ಬದ್ಧವಾಗಿಯೇ ಹಿಂಪಡೆಯುತ್ತೇವೆ: ಇಜಾಝ್ ಅಹ್ಮದ್

►► ಬ್ಯಾಂಕ್ ಖಾತೆ ತಾತ್ಕಾಲಿಕ ಮುಟ್ಟುಗೋಲು ವಿರೋಧಿಸಿ ಮಂಗಳೂರಿನಲ್ಲಿ ಪಿಎಫ್ ಐ ಪ್ರತಿಭಟನೆ

ಮಂಗಳೂರು: ಸಂಘಪರಿವಾರ ಮತ್ತು ಬಿಜೆಪಿ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಲು ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ. ನಮ್ಮ ಮೇಲೆ ವಿಶ್ವಾಸವಿಟ್ಟು ದೇಶದ ಜನರು ನೀಡಿರುವ ಹಣವನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿದ್ದು, ಈ ಹಣವನ್ನು ನಾವು ಕಾನೂನು ಹೋರಾಟದ ಮೂಲಕವೇ ಹಿಂಪಡೆಯುತ್ತೇವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.


ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವುದನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.


ಪಾಪ್ಯುಲರ್ ಫ್ರಂಟ್ ಕಚೇರಿ ಮತ್ತು ಸಂಘಟನೆಯ ಹಲವು ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ ಇಡಿ, ಐಟಿಗೆ ಏನೂ ಸಿಕ್ಕಿರಲಿಲ್ಲ. ಇದರಿಂದ ಹತಾಶೆಗೊಂಡು ಇದೀಗ ಸಂಘಟನೆಯ 23 ಖಾತೆಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಸಂಘಟನೆಯು ತನ್ನ ಪ್ರಾರಂಭದಿಂದಲೂ ಇದುವರೆಗೆ ದೇಶದ ಸಂವಿಧಾನ, ಕಾನೂನು ವಿರುದ್ಧವಾಗಿ ಹೋಗಿಲ್ಲ. ಮುಂದೆಯೂ ಹೋಗುವುದಿಲ್ಲ. ಆದ್ದರಿಂದ ಇಡಿಯ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಜಯ ಪಡೆಯುವ ವಿಶ್ವಾಸವಿದೆ ಎಂದು ಇಜಾಝ್ ಅಹ್ಮದ್ ಹೇಳಿದರು.


ಮುಟ್ಟುಗೋಲು ಹಾಕಿಕೊಂಡ ಪೂರ್ಣ ವಿವರವನ್ನು ಇಡಿ ಜನರ ಮುಂದಿಟ್ಟಿಲ್ಲ. 59 ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದೆ. ಆದರೆ ಈ ಹಿಂದೆ ಪಾಪ್ಯುಲರ್ ಫ್ರಂಟ್ ಗೆ 120 ಕೋಟಿ ಜಮೆ ಆಗಿದೆ ಎಂದು ಇಡಿಯು ತನ್ನ ಕೈಗೊಂಬೆಯಾಗಿರುವ ಕೆಲವು ಸುದ್ದಿವಾಹಿನಿಗಳ ಮೂಲಕ ಸುದ್ದಿ ಹರಿಯಬಿಟ್ಟಿತ್ತು. ಇದೇ ಇಡಿ ಈಗ ಅಧಿಕೃತ ಮಾಹಿತಿಯಲ್ಲಿ 13 ವರ್ಷಗಳಲ್ಲಿ 60 ಕೋಟಿಯಷ್ಟು ಮಾತ್ರ ಜಮೆಯಾಗಿದೆ ಎಂದು ಹೇಳಿದೆ. ಹಾಗಾದರೆ 120 ಕೋಟಿ ರೂ. ಎಂಬ ತನ್ನ ಹಳೆಯ ಹೇಳಿಕೆ ಸುಳ್ಳು ಎಂಬುದನ್ನು ಇಡಿ ಒಪ್ಪಿಕೊಂಡಂತಾಗಿದೆ ಎಂದು ಅವರು ಹೇಳಿದರು.
ಅಕ್ರಮ ಹಣ ವರ್ಗಾವಣೆ ಎಂಬ ಇಡಿಯ ಆರೋಪ ಮುಂದಿನ ದಿನಗಳಲ್ಲಿ ಸುಳ್ಳಾಗಲಿದೆ. ನಿಮಗೆ ತಾಕತ್ತು ಮತ್ತು ನೈತಿಕತೆ ಇದ್ದರೆ ಯಾವ ಉದ್ದೇಶಕ್ಕೆ ಈ ಹಣ ಬಳಸಲಾಗಿದೆ ಎಂಬುದನ್ನು ದೇಶದ ಮುಂದಿಡಿ ಎಂದು ಸವಾಲು ಹಾಕಿದ ಇಜಾಝ್ ಅಹ್ಮದ್, ಜನಸಾಮಾನ್ಯರು ನೀಡಿದ ಈ ಹಣವನ್ನು ಅಸ್ಸಾಂ, ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಪಾಕೃತಿಕ ವಿಕೋಪ ಉಂಟಾದಾಗ ಖರ್ಚು ಮಾಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಶವ ಸಂಸ್ಕಾರ ನೆರವೇರಿಸಲು ಖರ್ಚು ಮಾಡಲಾಗಿದೆ ಮತ್ತು ವರ್ಷಂಪ್ರತಿ ಪಾಪ್ಯುಲರ್ ಫ್ರಂಟ್ ಹಮ್ಮಿಕೊಳ್ಳುವ ಸ್ಕೂಲ್ ಚಲೋ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಖರ್ಚು ಮಾಡಲಾಗುತ್ತಿದೆ ಎಂಬ ಸತ್ಯವನ್ನು ಕೂಡ ದೇಶದ ಜನರಿಗೆ ತಿಳಿಸಿ ಎಂದು ಹೇಳಿದರು.
ಇಡಿ, ಐಟಿ, ಎನ್ ಐಎ ಮುಂತಾದ ಸ್ವತಂತ್ರ ತನಿಖಾ ಸಂಸ್ಥೆಗಳು ಮೋದಿ, ಶಾ ಜೋಡಿಯ ತಾಳಕ್ಕೆ ಕುಣಿಯುತ್ತಿವೆ. ಸಂಘಪರಿವಾರದ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಮಾತನಾಡುವವರ ವಿರುದ್ಧ ಈ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿ ಹರ್ಷ ಮಂದರ್ ಅವರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕಾಗಿ ಅವರನ್ನು ಗುರಿಯಾಗಿಸಿ ಅವರ ಮನೆ ಮೇಲೆ ಇಡಿ ದಾಳಿ ನಡೆಸಿ, ಎಫ್ ಐಆರ್ ದಾಖಲಿಸಿದೆ. ಅದೇ ರೀತಿ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿ ಕಿರುಕುಳ ನೀಡಲಾಗಿದೆ. ಗ್ರೀನ್ ಪೀಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದೆ. ಇದರಿಂದ ಸಂಸ್ಥೆಯು ಭಾರತದಲ್ಲಿ ತನ್ನ ಕೆಲಸ ನಿಲ್ಲಿಸಿದೆ. ಅದೇ ರೀತಿ ವಿರೋಧ ಪಕ್ಷದವರ ಬಾಯಿ ಮುಚ್ಚಿಸಲು ಅವರ ಮನೆ, ಕಚೇರಿಗಳಿಗೆ ದಾಳಿ ನಡೆಸಲಾಗುತ್ತಿದೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿದಂಬರಂ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧವೂ ಇಡಿಯನ್ನು ಛೂ ಬಿಡಲಾಗಿದೆ ಎಂದು ಅವರು ಆರೋಪಿಸಿದರು.

ಯಾವುದೇ ಕಾರಣಕ್ಕೂ ಪಾಪ್ಯುಲರ್ ಫ್ರಂಟ್ ಅನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಇಡಿ, ಮಾನಸಿಕವಾಗಿ ಕಿರುಕುಳ ನೀಡಲು ಈ ಮುಟ್ಟುಗೋಲು ಪ್ರಯತ್ನಕ್ಕೆ ಕೈ ಹಾಕಿದೆ. ತನಿಖಾ ಸಂಸ್ಥೆಯ ಯಾವುದೇ ಒತ್ತಡಕ್ಕೆ ನಾವು ಬಗ್ಗುವವರಲ್ಲ. ಯಾವುದೇ ರೀತಿಯ ಕಿರುಕುಳ ನೀಡಿದರೂ ನ್ಯಾಯಬದ್ಧವಾಗಿ ಹೋರಾಟ ಮಾಡಿ ವಿಜಯ ಸಾಧಿಸುತ್ತೇವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷ ಹೇಳಿದರು.


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿ ಸದಸ್ಯ ಹನೀಫ್ ಕಾಟಿಪಳ್ಳ ಮಾತನಾಡಿ, ಗುಲಾಮಗಿರಿ ಮಾಡುವ ರಾಜಕೀಯ ನೇತಾರರಿಗೆ ಡೊಗ್ಗು ಸಲಾಂ ಹಾಕಲು ನಾವು ಈ ಸಂಘಟನೆಯನ್ನು ಕಟ್ಟಿಕೊಂಡಿಲ್ಲ. ದೇಶಕ್ಕೆ ಕ್ಯಾನ್ಸರ್ ಆಗಿರುವ ಮತ್ತು ದೇಶದ ಬಹುತ್ವಕ್ಕೆ ಮಾರಕವಾಗಿರುವ ಮನುವಾದವನ್ನು ಬೇರು ಸಹಿತ ಕಿತ್ತೊಗೆಯಲು ನಾವು ಸಂಘಟನೆಯನ್ನು ಕಟ್ಟಿಕೊಂಡಿದ್ದೇವೆ. ವಿಷ ಸಿದ್ಧಾಂತವನ್ನು ಕೊನೆಗೊಳಿಸಿ ಬಹುಮುಖ ಸಂಸ್ಕೃತಿಯ ಈ ದೇಶವನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ಮಂಗಳೂರು ಗ್ರಾಮಾಂತರ ಅಧ್ಯಕ್ಷ ನವಾಝ್ ಕಾವೂರು, ಮಂಗಳೂರು ನಗರಾಧ್ಯಕ್ಷ ಖಾದರ್ ಕುಳಾಯಿ, ಮಂಗಳೂರು ನಗರ ಕಾರ್ಯದರ್ಶಿ ಸಯೀದ್ ಕಿನ್ಯ ಮತ್ತಿತರರು ಭಾಗವಹಿಸಿದ್ದರು.

Join Whatsapp
Exit mobile version