Home ಟಾಪ್ ಸುದ್ದಿಗಳು ಹಮಾಸ್ ಜತೆ ಚರ್ಚೆಗೆ ಪ್ರತಿನಿಧಿ ರವಾನಿಸುತ್ತೇವೆ: ಅಮೆರಿಕ

ಹಮಾಸ್ ಜತೆ ಚರ್ಚೆಗೆ ಪ್ರತಿನಿಧಿ ರವಾನಿಸುತ್ತೇವೆ: ಅಮೆರಿಕ

ಅಮೆರಿಕ ಮನವಿ ನೀಡಿದ ತಕ್ಷಣ ಇಸ್ರೇಲ್ ಒಪ್ಪಿಕೊಳ್ಳುವುದಿಲ್ಲ: ಪ್ಯಾಲೆಸ್ತೀನ್

ವಿಶ್ವಸಂಸ್ಥೆ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನಕ್ಕೆ ಅಮೆರಿಕ ಪ್ರಯತ್ನ ಮುಂದುವರಿಸಿದ್ದು, ಕದನ ವಿರಾಮ ಒಪ್ಪಂದದ ಬಗ್ಗೆ ಹಮಾಸ್ ಜತೆ ಚರ್ಚೆಗೆ ಅಮೆರಿಕ ಪ್ರತಿನಿಧಿಯನ್ನು ರವಾನಿಸಲಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಲಿಂಡಾ ಥೋಮಸ್-ಗ್ರೀನ್ಫೀಲ್ಡ್,ಯಾವುದೇ ಭವಿಷ್ಯದ ದಾಳಿಯನ್ನು ತಡೆಯುವುದು ಮತ್ತು ರಕ್ಷಿಸುವುದು ಹಾಗೂ ಪ್ರಾದೇಶಿಕ ಸಂಘರ್ಷವನ್ನು ತಪ್ಪಿಸುವುದು ಅಮೆರಿಕದ ಪ್ರಧಾನ ಗುರಿಯಾಗಿದೆ. ಗಾಝಾದಲ್ಲಿ ಒತ್ತೆಸೆರೆಯಲ್ಲಿ ಇರುವವರ ಬಿಡುಗಡೆ ಸಹಿತ ಕದನ ವಿರಾಮ ರೂಪುಗೊಂಡರೆ ಇದು ಸಾಧ್ಯವಾಗಲಿದೆ. ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಪ್ಯಾಲೆಸ್ತೀನ್ ಪ್ರತಿನಿಧಿ ರಿಯಾದ್ ಮನ್ಸೂರ್, ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಸಾವಿರಾರು ಪ್ರಜೆಗಳನ್ನು ಕೊಲ್ಲುವುದು, ಬರಗಾಲವನ್ನು ಹೇರುವುದು, ಕೈದಿಗಳಿಗೆ ಚಿತ್ರಹಿಂಸೆ, ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡು ವಸಾಹತುಗಳನ್ನಾಗಿ ಮಾಡುವುದನ್ನು ನಿಲ್ಲಿಸುವಂತೆ ಅಮೆರಿಕ ಮನವಿ ನೀಡಿದ ತಕ್ಷಣ ಇಸ್ರೇಲ್ ಒಪ್ಪಿಕೊಳ್ಳುವುದಿಲ್ಲ. ನೀವು ಮನವಿ ಮಾಡುವುದನ್ನು ನಿಲ್ಲಿಸಿ ಆಗ್ರಹಿಸಬೇಕು ಎಂದು ಹೇಳಿದ್ದಾರೆ‌.

ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಈ ಸಂದರ್ಭ ಮಾತನಾಡಿ, ಇಸ್ರೇಲ್ ಮೇಲೆ ಯುದ್ಧದ ಬೆದರಿಕೆ ಒಡ್ಡುತ್ತಿರುವ ಇರಾನ್ ಅನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡಿಸಿಲ್ಲ ಎಂದು ಆಕ್ಷೇಪಿಸಿದರು. ಎಪ್ರಿಲ್‌ನಲ್ಲಿ ಮಾಡಿದಂತೆಯೇ, ಇರಾನ್‌ನಿಂದ ನೇರ ದಾಳಿಗೆ ಲಕ್ಷಾಂತರ ಇಸ್ರೇಲಿಯನ್ನರು ಸಿದ್ಧತೆ ನಡೆಸುತ್ತಿದ್ದಾರೆ. ಇರಾನ್‌ನ ಆಕ್ರಮಣವು ಇಡೀ ಪ್ರದೇಶವನ್ನು ಯುದ್ಧದ ಭೀತಿಗೆ ನೂಕಿದೆ ಎಂದು ಹೇಳಿದ್ದಾರೆ.

ಗಾಝಾದಲ್ಲಿ ಕದನ ವಿರಾಮ ಒಪ್ಪಂದ ಪೂರ್ಣಗೊಳಿಸಲು ಇದು ಸಕಾಲವಾಗಿದೆ. ಕದನ ವಿರಾಮ ಒಪ್ಪಂದ ಪೂರ್ಣಗೊಳಿಸಲು ಅಮೆರಿಕ ತೀವ್ರ ಪ್ರಯತ್ನ ಮುಂದುವರಿಸಿದೆ. ನಮ್ಮ ಕಾರ್ಯ ಫಲ ನೀಡುವ ನಿರೀಕ್ಷೆಯಿದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

Join Whatsapp
Exit mobile version