ಶಿರಸಿ: ಸಂಸದ ಅನಂತಕುಮಾರ ಹೆಗಡೆ ಅವರ ಬೆಂಬಲವನ್ನು ಪಡೆದು ಚುನಾವಣೆ ಎದುರಿಸುತ್ತೇನೆ. ಅನಂತ ಕುಮಾರ್ ಹೆಗಡೆ ರಾಷ್ಟ್ರೀಯತೆ, ಹಿಂದುತ್ವದೆಡೆ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವ ನಿರಂತರ ಪ್ರಯತ್ನ ಮಾಡಿದ್ದಾರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ..
ಟಿಕೆಟ್ ಘೋಷಣೆ ಬಳಿಕ ನಗರದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಅವರು ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸಿ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದಾರೆ. ಜತೆಗೆ, ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಲು ಸದಾ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಅವರ ಬೆಂಬಲ ಪಡೆದು ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿಸಲು ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದರು.
40 ವರ್ಷದ ರಾಜಕಾರಣದಲ್ಲಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಇದೀಗ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಅವಕಾಶ ನೀಡುವ ಮೂಲಕ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ಬಿಜೆಪಿ ಪರಿವಾರದವರೆಲ್ಲ ಒಂದಾಗಿ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ತರುತ್ತೇವೆ ಎಂದು ಕಾಗೇರಿ ಹೇಳಿದರು.