ಮಡಿಕೇರಿ: ವನ್ಯಜೀವಿಗಳು ಹಾಗೂ ಅವುಗಳ ಅಂಗಾಂಗಗಳನ್ನು ಮಾರಾಟ ಮಾಡುವ ಮಾಫಿಯಾದಲ್ಲಿ ಹೊಸಬರೇ ಹೆಚ್ಚಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
6 ತಿಂಗಳಲ್ಲಿ ಬಂಧಿಸಲ್ಪಟ್ಟಿರುವ 65 ಆರೋಪಿಗಳ ಪೈಕಿ ಬಹುತೇಕರು ಹೊಸಬರಾಗಿದ್ದು, ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ನಿರುದ್ಯೋಗ, ಬಡತನದ ಜೊತೆಗೆ ಬಹುಬೇಗ ಶ್ರೀಮಂತರಾಗುವ ದುರಾಸೆಯಿಂದ ಅವರು ಈ ವೃತ್ತಿಗೆ ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಕೊಡಗು ಜಿಲ್ಲೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದಲ್ಲಿರುವ 8 ಮಂದಿ ಪೊಲೀಸರು ಆರು ತಿಂಗಳಿನಲ್ಲಿ 65 ಆರೋಪಿಗಳನ್ನು ಬಂಧಿಸಿರುವುದು ವಿಶೇಷ. ಆನೆ ದಂತಗಳು, ಹುಲಿಯ ಉಗುರು, ಹಲ್ಲುಗಳು, 17.50 ಕೆ.ಜಿ ಚಿಪ್ಪುಹಂದಿಯ ಚಿಪ್ಪುಗಳೊಂದಿಗೆ, ಜೀವಂತ ನಕ್ಷತ್ರ ಆಮೆಗಳು, ಉಡಗಳು, ನವಿಲುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾಫಿಯಾದ ಬಗ್ಗೆ ಗೊತ್ತು ಗುರಿಯಿಲ್ಲದೇ ಆಕಸ್ಮಿಕವಾಗಿ ಈ ದಂಧೆಗೆ ಇಳಿದಿರುವ ಆರೋಪಿಗಳು ವನ್ಯಜೀವಿಗಳಿಗೆ ಕಾಳಸಂತೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಸಿಗುತ್ತದೆ ಎಂಬ ನಂಬಿಕೆಯಿಂದಾಗಿ ಕಾಡಂಚಿನಲ್ಲಿ ಸಿಕ್ಕಿದ ವನ್ಯಜೀವಿಗಳ ಅಂಗಾಂಗಗಳನ್ನು ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.