ಕೇರಳ ವಿಮಾನ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಆಭರಣಗಳನ್ನು ಜಮಾತೆ ಇಸ್ಲಾಮಿ ಹಿಂದ್ ನ ಅಂಗ ಸಂಸ್ಥೆಗೆ ದಾನ ಮಾಡಿದ ಪತಿ ನಿಜಾಸ್

Prasthutha News

►10 ತಿಂಗಳ ಮಗು ಅಝಂನನ್ನೂ ಕಳೆದುಕೊಂಡಿದ್ದ ಕುಟುಂಬದ ಉದಾರತೆ

ಕಳೆದ ಆಗಸ್ಟ್ 7 ರಂದು ಕೇರಳದ ಕಲ್ಲಿಕೋಟೆಯಲ್ಲಿ ಅಪಘಾತಕ್ಕೀಡಾಗಿದ್ದ ಏರ್ ಇಂಡಿಯಾ  ವಿಮಾನದಲ್ಲಿ ಮೃತಪಟ್ಟಿದ್ದ ತನ್ನ ಪತ್ನಿ ಸಾಹಿರಾ ಬಾನು ಅವರ ಆಭರಣಗಳನ್ನು ಪತಿ ಮೊಹಮ್ಮದ್ ನಿಜಾಸ್ ಅವರು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಅಂಗ ಸಂಸ್ಥೆಯಾಗಿರುವ ‘ವಿಶನ್-2026’ ಗೆ ದಾನ ಮಾಡಿ ಉದಾರತೆ ಮೆರೆದಿದ್ದಾರೆ. ಈ ಕುರಿತು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

“ಮರಣೋತ್ತರ ವೇಳೆಯಲ್ಲಿ ಅವಳ ಆಭರಣಗಳನ್ನು ನನ್ನ ಸೋದರಳಿಯನ ಕೈಯ್ಯಲ್ಲಿ ನೀಡಲಾಗಿತ್ತು. ಅಪಘಾತಕ್ಕೀಡಾದ ಮರುದಿನ ಊರಿಗೆ ತಲುಪಿದ ನನಗೆ ಇಲ್ಲಿನ ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ 28 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗಿತ್ತು. ಇದರಿಂದಾಗಿ ಆಭರಣಗಳನ್ನು ದಾನ ಮಾಡಲು ಸ್ವಲ್ಪ ಕಾಲಾವಕಾಶ ತೆಗೆದುಕೊಂಡೆವು” ಎಂದು ಪತಿ ನಿಜಾಸ್ ಹೇಳಿದ್ದಾರೆ.  

“ನನ್ನ ಹಾಗೂ ಸಾಹಿರಾಳ ಕುಟುಂಬದ ಪ್ರಕಾರ ಅವಳ ಆಭರಣಗಳನ್ನು ಯಾವುದಾದರೂ ನಿರ್ಗತಿಕ ಮದುಮಗಳೊಬ್ಬಳು ಧರಿಸುವುದರಿಂದ ಖಂಡಿತವಾಗಿಯೂ ಸಾಹಿರಾ ಇದ್ದಿದ್ದರೆ ಅವಳು ಸಂತೋಷಪಡುತ್ತಿದ್ದಳು” ಎಂದು ನಿಜಾಸ್ ಹೇಳುತ್ತಾರೆ

ವಿಶನ್-2026’ ಸಂಸ್ಥೆ ಬಡ ಹಾಗೂ ನಿರ್ಗತಿಕರ ಶಿಕ್ಷಣ ಹಾಗೂ ಮದುವೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.  29 ವರ್ಷ ವಯಸ್ಸಿನ ಸಾಹಿರಾ ಬಾನು ಮತ್ತವರ 10 ತಿಂಗಳ ಮಗು ಅಝಂ ಮುಹಮ್ಮದ್ ಅವರು ಈ ದುರಂತದಲ್ಲಿ ಮೃತಪಟ್ಟಿದ್ದರು. ಸಾಹಿರಾ ಬಾನು ಅವರ ಸರ, ಬಳೆಗಳು, ಕಿವಿಯೋಲೆ ಹಾಗೂ ಉಂಗುರಗಳು ದಾನ ಮಾಡಿದ ಆಭರಣಗಳಾಗಿವೆ.  


Prasthutha News

Leave a Reply

Your email address will not be published. Required fields are marked *