ಚೆನ್ನೈ : ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ನಿಕಿತಾ ಕೌಲ್ ಇಂದು ಸೇನೆಗೆ ಸೇರ್ಪಡೆಗೊಂಡರು. ಸೇನೆಯ ಉತ್ತರ ಕಮಾಂಡ್ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ ಅವರು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ನಿಕಿತಾ ಕೌಲ್ ಗೆ ಸ್ಟಾರ್ ಗಳನ್ನು ಅವರ ಹೆಗಲಿಗೆ ಅಂಟಿಸಿ ಗೌರವ ಸಲ್ಲಿಸಿದರು.
ಕೌಲ್ ಅವರು ಅಧಿಕಾರ ಸ್ವೀಕರಿಸುತ್ತಿರುವ ಸಣ್ಣ ವೀಡಿಯೊ ತುಣುಕೊಂದನ್ನು ಪಿಆರ್ ಒ ಉಧಂಪುರ್, ಮಿನಿಸ್ಟ್ರಿ ಆಫ್ ಡಿಫೆನ್ಸ್ ಟ್ವೀಟ್ ಮಾಡಿದೆ.
೨೦೧೯ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಹುತಾತ್ಮರಾಗಿದ್ದರು. ಇದೀಗ ಅವರ ಪತ್ನಿ ನಿಕಿತಾ ಕೌಲ್ ಭಾರತೀಯ ಸೇನೆಯ ಸಮವಸ್ತ್ರದಲ್ಲಿ ಕಂಗೊಳಿಸುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ತಮ್ಮ ಸಾಧನೆಗಾಗಿ ನಿಕಿತಾ ಕೌಲ್ ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡುವಾಗ ಮೇಜರ್ ಧೌಂಡಿಯಾಲ್ ಕೊನೆಯುಸಿರೆಳೆದಿದ್ದರು. ಅವರು ಮರಣೋತ್ತರ ಶೌರ್ಯ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ.