ಲೈಂಗಿಕ ಕಾರ್ಯಕರ್ತೆಗೆ ಇರುವ ಹಕ್ಕು ಪತ್ನಿಗೆ ಯಾಕೆ ಇಲ್ಲ: ದೆಹಲಿ ಹೈಕೋರ್ಟ್

Prasthutha|

ನವದೆಹಲಿ: ಸಮ್ಮತಿಯಿಲ್ಲದ ಲೈಂಗಿಕ ಕ್ರಿಯೆಯ ವಿರುದ್ಧ ಯಾರು ಬೇಕಾದರೂ ಅತ್ಯಾಚಾರದ ಮೊಕದ್ದಮೆ ಹೂಡಬಹುದಾದರೆ ವಿವಾಹಿತ ಮಹಿಳೆಯರಿಗೆ ಈ ಹಕ್ಕನ್ನು ನಿರಾಕರಿಸುವುದು ಸರಿಯಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ನ್ಯಾಯಾಲಯವು ಪತ್ನಿಯ ಸಮ್ಮತಿ ಇಲ್ಲದ ಲೈಂಗಿಕ ಕ್ರಿಯೆಯನ್ನು ಅಪರಾಧೀಕರಿಸಬೇಕು ಎಂಬ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಈ ಹೇಳಿಕೆ ನೀಡಿದೆ.

- Advertisement -

ಲೈಂಗಿಕ ಕಾರ್ಯಕರ್ತರು ಸಹ ತಮ್ಮ ಗ್ರಾಹಕರಿಗೆ ‘ಇಲ್ಲ’ ಎಂದು ಹೇಳುವ ಹಕ್ಕನ್ನು ಹೊಂದಿದ್ದಾರೆ. ಹಾಗಿರುವಾಗ ಲೈಂಗಿಕತೆಗೆ ಸಮ್ಮತಿ ಇಲ್ಲ ಎಂದು ಪತಿಗೆ ಹೇಳುವ ಹೆಂಡತಿಯ ಹಕ್ಕನ್ನು ಹೇಗೆ ನಿರಾಕರಿಸುವುದು ಎಂದು ಮುಖ್ಯ ನ್ಯಾಯಮೂರ್ತಿ ರಾಜೀವ್ ಶಕ್ಧರ್ ಅವರು ಕೇಳಿದರು. ಲೈಂಗಿಕ ಕಾರ್ಯಕರ್ತರು ಸಹ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುವ ವ್ಯಕ್ತಿಯ ವಿರುದ್ಧ ಮೊಕದ್ದಮೆ ಹೂಡುವ ಹಕ್ಕನ್ನು ಹೊಂದಿದ್ದಾರೆ ಎಂದು ಹಿರಿಯ ವಕೀಲ ರಾಜ್ ಶೇಖರ ರಾವ್ ಹೇಳಿದ್ದರು. ಇದನ್ನು ಎತ್ತಿ ಹಿಡಿದು ಶಕ್ಧರ್ ಅವರು ಪ್ರತಿಕ್ರಿಯಿಸಿದರು.

ಆದರೆ, ಈ ಎರಡು ಸಂಬಂಧಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಶಕ್ಧರ್ ಅವರ ಪೀಠದ ಇನ್ನೊಬ್ಬ ಸದಸ್ಯ ನ್ಯಾಯಮೂರ್ತಿ ಸಿ. ಹರಿಶಂಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿವಾಹವು ಗ್ರಾಹಕ ಮತ್ತು ಲೈಂಗಿಕ ಕಾರ್ಯಕರ್ತೆಯ ನಡುವಿನ ಸಂಬಂಧವಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪತ್ನಿ ಸಾಕಷ್ಟು ಕಷ್ಟ ಅನುಭವಿಸಬಹುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಹತ್ತು ವರ್ಷಗಳ ಶಿಕ್ಷೆಯನ್ನು ಎದುರಿಸಬೇಕಾಗಿರುವ ಪತಿಯೊಬ್ಬ ಅನುಭವಿಸಬೇಕಾದ ತೊಂದರೆಗಳ ಬಗ್ಗೆಯೂ ನಾವು ಯೋಚಿಸಬೇಕಾಗಿದೆ. ಆದರೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬಾರದು ಎಂದು ನಾನು ಹೇಳುತ್ತಿಲ್ಲ ಎಂದು ಅವರು ಹೇಳಿದರು.

- Advertisement -

ಯಾವುದೇ ರೀತಿಯಲ್ಲಾದರೂ ಅತ್ಯಾಚಾರವು ಅಪರಾಧವಾಗಿದೆ ಎಂದು ರಾಜ್ ಶೇಖರ್ ರಾವ್ ವಾದಿಸಿದರು. ಮಹಿಳೆಯರ ಅತ್ಯಂತ ಮೌಲ್ಯಯುತ ಹಕ್ಕುಗಳನ್ನು ಉಲ್ಲಂಘಿಸುವುದು ಸಮಾಜ ಘಾತುಕ ಕೃತ್ಯವಾಗಿದೆ ಎಂದು ನ್ಯಾಯಾಲಯಗಳು ನಿರಂತರ ಹೇಳುತ್ತಾ ಬಂದಿವೆ ಎಂದು ಅವರು ಹೇಳಿದರು.

Join Whatsapp