Home ಟಾಪ್ ಸುದ್ದಿಗಳು ಬಡವರ ಮೇಲೆ ಯಾಕಿಷ್ಟು ಕೋಪ?: ಗ್ಯಾರಂಟಿ ಯೋಜನೆಗಳ ಹೆಚ್ಡಿಕೆ ಟೀಕೆಗಳಿಗೆ ಸಿದ್ದರಾಮಯ್ಯ ಗರಂ

ಬಡವರ ಮೇಲೆ ಯಾಕಿಷ್ಟು ಕೋಪ?: ಗ್ಯಾರಂಟಿ ಯೋಜನೆಗಳ ಹೆಚ್ಡಿಕೆ ಟೀಕೆಗಳಿಗೆ ಸಿದ್ದರಾಮಯ್ಯ ಗರಂ

ಬೆಂಗಳೂರು: ರಾಜ್ಯದ ಗ್ಯಾರಂಟಿ ಯೋಜನೆಗಳ ಕುರಿತ ಜೆಡಿಎಸ್‌ ನಾಯಕ ಕುಮಾರಸ್ವಾಮಿಯವರ ನಿರಂತರ ಟೀಕೆಗೆ ಮುಖ್ಯಮಂತ್ರಿ ಸಿದ್ಶರಾಮಯ್ಯ ಗರಂ ಆಗಿದ್ದಾರೆ‌. ಕುಮಾರ ಸ್ವಾಮಿಯವರೇ ನಿಮಗೇಕೆ ರಾಜ್ಯದ ಬಡವರ ಮೇಲೆ ಈ ಪರಿ ದ್ವೇಷ ಎಂದು ಕೇಳಿದ್ದಾರೆ.

ತಮ್ಮ ಫೇಸ್ಬುಕ್‌ ಹಾಗೂ X ಖಾತೆಯಲ್ಲಿ ದೀರ್ಘ ಪೋಸ್ಟ್‌ ಮಾಡಿ ಕುಮಾರ ಸ್ವಾಮಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರೇ, ನಿಮಗೆ ಯಾಕೆ ರಾಜ್ಯದ ಬಡವರ ಮೇಲೆ ಈ ಪರಿಯ ದ್ವೇಷ? ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ದಿನದಿಂದ ಅದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ನಿಮ್ಮ ದಿನಚರಿಯಾಗಿ ಬಿಟ್ಟಿದೆ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದೆಂದರೆ ಕೋಟ್ಯಂತರ ಸಂಖ್ಯೆಯಲ್ಲಿರುವ ಬಡ ಫಲಾನುಭವಿಗಳನ್ನು ವಿರೋಧಿಸುವುದೆಂದೇ ಅರ್ಥ. ಯಾಕೆ ಬಡವರ ಹೊಟ್ಟೆಗೆ ಹೊಡೆಯುವ ಕಿಚ್ಚು?

ಮುಂದುವರೆದು ಸಿದ್ದರಾಮಯ್ಯ, ರಾಜ್ಯದ ಕೋಟ್ಯಂತರ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮತದಾರರೂ ಸೇರಿದ್ದಾರೆ. ಗ್ಯಾರಂಟಿ ಯೋಜನೆಗಳ ಫಲಿತಾಂಶವನ್ನು ತಿಳಿದುಕೊಳ‍್ಳುವ ಪ್ರಾಮಾಣಿಕ ಉದ್ದೇಶ ನಿಮಗಿದ್ದರೆ ಬೆಂಗಳೂರಿನಲ್ಲಿ ಕೂತು ಪತ್ರಿಕಾಗೋಷ್ಠಿ ನಡೆಸುವುದಲ್ಲ, ಹಳ್ಳಿಗಳಿಗೆ ಹೋಗಿ ಅಲ್ಲಿರುವ ಫಲಾನುಭವಿಗಳನ್ನು ಮಾತನಾಡಿಸಿ ಎಂದು ಕಿಡಿಗಾರಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಬಹಳ ಮುಖ್ಯವಾಗಿ ರಾಜ್ಯದ ಬಡಜನರನ್ನು ಗುರಿಯಾಗಿಸಿಕೊಂಡು ರೂಪಿಸಿರುವಂತಹದ್ದು. ಅದು ಶ್ರೀಮಂತರು ಇಲ್ಲವೇ ಉದ್ಯಮಿಗಳಿಗೆ ನೆರವಾಗುವ ತೆರಿಗೆ ವಿನಾಯಿತಿಯೂ ಅಲ್ಲ, ಅವರ ಸಾಲ ಮನ್ನಾ ಮಾಡುವ ಯೋಜನೆಯೂ ಅಲ್ಲ. ವಂಚಕ ಉದ್ಯಮಿಗಳಿಗೆ ನೆರವಾಗಲು ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸೊಲ್ಲೆತ್ತಲಾಗದ ಕುಮಾರಸ್ವಾಮಿಯವರು ಮೂರು ಹೊತ್ತು ಗ್ಯಾರಂಟಿ ಯೋಜನೆಗಳ ಚುಂಗು ಹಿಡಿದು ಜಗ್ಗಾಡುತ್ತಿದ್ದಾರೆ ಎಂದು ಹೇಳಿದ ಸಿಎಂ, ಸುಳ್ಳು ಆರೋಪಗಳ ಮೂಲಕ ದಿನನಿತ್ಯ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕುಮಾರಸ್ವಾಮಿ ಅವರೇ, ನನ್ನನ್ನು ಟೀಕಿಸುವುದರಿಂದ ನಿಮ್ಮ ಮನಸಿಗೆ ಶಾಂತಿ ಸಿಗುವುದಿದ್ದರೆ ನಿಮ್ಮ ದ್ವೇಷಾಸೂಯೆ ಮುಂದುವರಿಯಲಿ. ಚುನಾವಣಾ ಸೋಲಿನ ನಿಮ್ಮ ನಿರಾಶೆ, ಅದರಿಂದಾಗಿರುವ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ರಾಜ್ಯದ ಬಡವರನ್ನು ಯಾಕೆ ಈ ರೀತಿ ದ್ವೇಷಿಸುತ್ತಿದ್ದೀರಿ. ಬಡವರ ಕಲ್ಯಾಣಕ್ಕಾಗಿಯೇ ರೂಪಿಸಲಾಗಿರುವ ಯೋಜನೆಗಳನ್ನು ಯಾಕೆ ವಿರೋಧಿಸುತ್ತಿದ್ದೀರಿ? ಕಳೆದ ಚುನಾವಣೆಯಲ್ಲಿ ಅವರು ನಿಮ್ಮ ಪಕ್ಷವನ್ನು ತಿರಸ್ಕರಿಸಿದ್ದಕ್ಕಾಗಿ ದ್ವೇಷವೇ ಎಂದು ಕೇಳಿದ್ದಾರೆ.

Join Whatsapp
Exit mobile version