►ರಾಜ್ಯ ಬಿಜೆಪಿ ಸರ್ಕಾರದಿಂದ ನಿರಂತರ ಆಡಳಿತ ದುರುಪಯೋಗ
ಮಂಗಳೂರು: ವಿಧಾನ ಸಭಾ ಚುನಾವಣಾ ಕಾಲದಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ಆಡಳಿತ ಯಂತ್ರವನ್ನು ನಿರಂತರವಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಸರಕಾರದ ನಾನಾ ಕಾರ್ಯಕ್ರಮಗಳನ್ನು ಪಕ್ಷದ ಕಾರ್ಯಕ್ರಮದಂತೆ ನಡೆಸಿರುವುದು ಕಂಡು ಬಂದಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿಗಳಲ್ಲಿ ಒತ್ತಡ ಹೇರಿರುವುದಲ್ಲದೆ ಹುಳು ಇರುವ ಅಕ್ಕಿ ವಿತರಿಸಿದ್ದಾರೆ. ಅಂಗನವಾಡಿಯ ಅಕ್ಕಿಯಲ್ಲಿ ಹುಳು ಕಂಡಾಗ ಒಳ್ಳೆಯ ಅಕ್ಕಿ ಪೂರೈಸುವ ಬದಲು ಅಂಗನವಾಡಿ ಕಾರ್ಯಕರ್ತರನ್ನು ಕರೆಸಿ ಬೆದರಿಕೆ ಹಾಕಿದ್ದಾರೆ. ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಬಯ್ದಿದ್ದಾರೆ, ಇದು ಖಂಡನೀಯ ಎಂದು ರಮಾನಾಥ ರೈ ಹೇಳಿದರು.
ನಮ್ಮ ಮಂಗಳೂರು ಶಾಸಕರು ಕೂಡ ಆಡಳಿತ ಯಂತ್ರ ಬಳಸಿಕೊಂಡಿರುವುದು ಕೂಡ ಸರಿಯಲ್ಲ. ಮೋದಿ ಕಾರ್ಯಕ್ರಮಕ್ಕೆ ಒತ್ತಾಯದಿಂದ ಸರಕಾರದ ಯಂತ್ರ ದುರುಪಯೋಗ ಮಾಡಬಾರದು ಎಂದು ರಮಾನಾಥ ರೈ ತಿಳಿಸಿದರು.
ಶಾಲಾ ಮಕ್ಕಳ ಪ್ರತಿಭಾ ಪ್ರದರ್ಶನವು ಈಗ ಕೇಶವ ಸ್ಮೃತಿ ಎಂದು ಸಂಘನಿಕೇತನದಲ್ಲಿ ನಡೆಯುತ್ತಿದೆ. ಇದರಲ್ಲಿ ಭಾಗವಹಿಸಿ ಎಂದು ದಕ್ಷಿಣ ಕನ್ನಡ ಡಿಡಿಪಿಐ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಶಾಲಾ ಮಕ್ಕಳ ಪ್ರತಿಭಾ ಪ್ರದರ್ಶನ ಸಂಘ ನಿಕೇತನದಲ್ಲಿ ನಡೆಯುವಾಗ ಅದಕ್ಕೆ ಹೋಗಲು ಅಧಿಕಾರಿಗಳಿಗೆ ಹೇಳುವುದು, ಶಿಕ್ಷಕರಿಗೆ ರಜಾ ನೀಡುವುದು ಇವೆಲ್ಲ ಅಧಿಕಾರದ ದುರುಪಯೋಗ ಎಂದು ರೈ ಕಿಡಿಕಾರಿದರು.
ಮಕ್ಕಳ ಕಾರ್ಯಕ್ರಮ ಯಾರು ಬೇಕಾದರೂ ಮಾಡಬಹುದು. ಆದರೆ ಚುನಾವಣೆ ಬರುವಾಗ ಅಧಿಕಾರ ಯಂತ್ರ ದುರುಪಯೋಗಪಡಿಸುವುದು ಸರಿಯಲ್ಲ. ಇತ್ತೀಚೆಗೆ ಆರೋಗ್ಯ ಮಿತ್ರ ನೇಮಕಾತಿ ಗುತ್ತಿಗೆ ಆಧಾರದಲ್ಲಿ ಆಗಿದೆ. ಅವರನ್ನು ಈಗ ಸರಕಾರದ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಹೇಳಲಾಗಿದೆ. ಇದು ಯಾವ ಆರೋಗ್ಯ ನ್ಯಾಯ? ಎಂದು ರೈ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಶಾಲೆಟ್ ಪಿಂಟೊ, ಇಬ್ರಾಹೀಂ ಕೋಡಿಜಾಲ್, ಹರಿನಾಥ್, ಲುಕ್ಮಾನ್ ಬಂಟ್ವಾಳ, ಬೇಬಿ ಕುಂದರ್, ಪದ್ಮನಾಭ ಜೈನ್, ಅಬ್ಬಾಸ್ ಆಲಿ ಮೊದಲಾದವರು ಉಪಸ್ಥಿತರಿದ್ದರು.