Home ಟಾಪ್ ಸುದ್ದಿಗಳು ಇಷ್ಟೊಂದು ಕೀಳು ಮನಸ್ಥಿತಿ ಯಾಕೆ​: ಸಮಿತಿ ರಚಿಸಿದ ಜೆಪಿ ನಡ್ಡಾಗೆ ಜಾಡಿಸಿದ ಸಿದ್ದರಾಮಯ್ಯ

ಇಷ್ಟೊಂದು ಕೀಳು ಮನಸ್ಥಿತಿ ಯಾಕೆ​: ಸಮಿತಿ ರಚಿಸಿದ ಜೆಪಿ ನಡ್ಡಾಗೆ ಜಾಡಿಸಿದ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ಸಾಲುಸಾಲು ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಣ್ಣು ಮುಚ್ಚಿ ಕೂತಿದ್ದರು. ಈಗ ಅವರ ನಿದ್ದೆಗಣ್ಣಿಗೆ ಬೆಳಗಾವಿಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಮಾತ್ರ ಕಾಣಿಸಿಕೊಂಡಿದ್ದು, ಅದರಲ್ಲಿ ರಾಜಕೀಯ ಬೇಳೆ ಬೇಯಿಸಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಸಂಬಂಧ ಜೆಪಿ ನಡ್ಡಾ ಅವರು ಸತ್ಯಾಶೋಧನಾ ಸಮಿತಿ ರಚಿಸಿದ್ದಾರೆ. ಇದೀಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕರಣ ಹೊರಡಿಸಿ ಜೆಪಿ ನಡ್ಡಾ ನಡೆಯನ್ನು ಟೀಕಿಸಿದ್ದಾರೆ.

ಬೆಳಗಾವಿಯಲ್ಲಿ ಮಹಿಳೆ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಅತ್ಯಂತ ಖಂಡನೀಯ. ಮನುಷ್ಯರೆಲ್ಲರೂ ತಲೆತಗ್ಗಿಸುವಂತಹ ಆ ಘಟನೆಯನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕೀಳು ಮನಸ್ಥಿತಿ ಇನ್ನೂ ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯ ಘಟನೆ ಗೊತ್ತಾದ ಕ್ಷಣವೇ ನಮ್ಮ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತ್ರಸ್ತೆಯ ಮನೆಗೆ ಭೇಟಿಕೊಟ್ಟು ಸಾಂತ್ವನ ನೀಡಿದ್ದು ಮಾತ್ರವಲ್ಲ ಪರಿಹಾರವನ್ನೂ ನೀಡಿದ್ದಾರೆ. ಪೊಲೀಸರು ಇಪ್ಪತ್ತನಾಲ್ಕು ಗಂಟೆಗೊಳಗೆ ದೌರ್ಜನ್ಯ ನಡೆಸಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಿದ್ದಾರೆ. ನಾನೇ ಖುದ್ದಾಗಿ ಈ ಪ್ರಕರಣದ ತನಿಖೆಯ ಮೇಲೆ ನಿಗಾ ಇಟ್ಟಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಅಮಾನುಷ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದರು. ರಾಜ್ಯ ಸರ್ಕಾರ ಕೈಗೊಂಡ ಕ್ರಮದಿಂದ ರಾಜ್ಯದ ಬಿಜೆಪಿ ನಾಯಕರಿಗೂ ಸಮಾಧಾನವಾಗಿದೆ. ಹೀಗಿರುವಾಗ ಘಟನೆ ನಡೆದು ನಾಲ್ಕು ದಿನಗಳನಂತರ ಇದ್ದಕ್ಕಿದ್ದ ಹಾಗೆ ಜೆ.ಪಿ.ನಡ್ಡಾ ಅವರು ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಕೆದಕಲು ಹೊರಟಿರುವುದಕ್ಕೆ ರಾಜಕೀಯ ದುರುದ್ದೇಶ ಕಾರಣವೇ ಹೊರತು ಮಹಿಳೆಯರ ಮೇಲಿನ ಕಾಳಜಿ ಖಂಡಿತ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಡ್ಡಾ ಅವರು ಮಹಿಳೆಯರ ಮೇಲೆ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ ಮಹಿಳೆಯರ ರಕ್ಷಣೆಯಲ್ಲಿ ವಿಫಲವಾಗಿದ್ದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ದವೇ ಕ್ರಮ ಕೈಗೊಳ್ಳಬೇಕಾಗಿತ್ತು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ನ್ಯಾಷನಲ್ ಕ್ರೈಮ್ ಬ್ಯುರೋ ವರದಿ ಪ್ರಕಾರ, ಕಳೆದ ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದ 17,813 ಪ್ರಕರಣಗಳು ದಾಖಲಾಗಿವೆ. ಅದರ ಹಿಂದಿನ ವರ್ಷ 2012ರಲ್ಲಿ 14,468 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು. ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಏನು ಮಾಡುತ್ತಿದ್ದರು? ವನವಾಸದಲ್ಲಿದ್ದರಾ? ಅವರದ್ದೇ ಸರ್ಕಾರದ ಮೂಗಿನಡಿಯಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದದ್ದು ಗಮನಕ್ಕೆ ಬಂದಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ ಮಣಿಪುರದಿಂದ ಗುಜರಾತ್ ವರೆಗೆ, ಉತ್ತರಪ್ರದೇಶದಿಂದ ಮಧ್ಯಪ್ರದೇಶದ ವರೆಗೆ ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಅಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನ್ಯಾಷನಲ್ ಕ್ರೈಮ್ ಬ್ಯುರೋ ವರದಿಗಳೇ ಹೇಳುತ್ತಿವೆ. ಬಿಜೆಪಿ ಸ್ವಭಾವತಃ ಮಹಿಳಾ ವಿರೋಧಿ ಎನ್ನುವುದನ್ನು ಈ ಪ್ರಕರಣಗಳು ಸಾಬೀತು ಪಡಿಸಿವೆ ಎಂದು ತಿಳಿಸಿದ್ದಾರೆ. ರಾಜ್ಯ ಬಿಜೆಪಿಯೊಳಗಿನ ಒಳಜಗಳ ತಾರಕಕ್ಕೇರಿದ್ದು ಪಕ್ಷದ ಮಾನಮರ್ಯಾದೆ ಬೀದಿಬೀದಿಗಳಲ್ಲಿ ಹರಾಜಾಗುತ್ತಿದೆ. ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ವಿರುದ್ದ ಪಕ್ಷದ ಹಿರಿಯ ನಾಯಕರೇ ಗಂಭೀರ ಸ್ವರೂಪದ ಆರೋಪಗಳನ್ನ ಮಾಡುತ್ತಿದ್ದಾರೆ. ನಡ್ಡಾ ಅವರಿಗೆ ದಮ್ಮು ತಾಖತ್ ಇದ್ದರೆ ಈ ನಾಯಕರ ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ಕಳಿಸಲಿ ಎಂದು ಸವಾಲು ಹಾಕಿದ್ದಾರೆ.

Join Whatsapp
Exit mobile version