►ಶಾಸಕರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಬೇರೆ ಕಾನೂನುಗಳು ಇದೆಯಾ?
ಮಂಗಳೂರು: ಮುಸ್ಲಿಮರು ಪ್ರತಿಭಟನೆ ಮಾಡಿದಾಗ ಲಾಠಿ ಚಾರ್ಜ್ ಮಾಡಿ ತಲೆ ಒಡೆಯುವ ಪೊಲೀಸರು, ಹರೀಶ್ ಪೂಂಜ ಮತ್ತು ಬೆಂಬಲಿಗರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಳೆದ 6 ವರ್ಷಗಳಿಂದ ಗೂಂಡಾ ವರ್ತನೆ ಪದೇ ಪದೇ ಪುನರಾವರ್ತನೆಯಾಗುತ್ತಿದೆ. ಒಬ್ಬ ಶಾಸಕ ಯಾವ ರೀತಿ ಇರಬಾರದು ಎನ್ನುವುದಕ್ಕೆ ಹರೀಶ್ ಪೂಂಜ ಉದಾಹರಣೆಯಾಗಿದೆ. ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಅಕ್ರಮ ಕಲ್ಲಿನಕೋರೆ ನಡೆಸಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದರು.ಅವರನ್ನು ಬಂಧಿಸಿದ್ದಕ್ಕೆ ಶಾಸಕ ಪೂಂಜ ಅಕ್ರಮ ಕೂಟ ಕಟ್ಟಿಕೊಂಡು ಹೋಗಿ ಪೊಲೀಸರಿಗೆ ಬೈದು ಬೆದರಿಕೆ ಹಾಕಿರುವುದು ಅಪರಾಧ ಎಂದರು.
ಹರೀಶ್ ಪೂಂಜ ಪದೇ ಪದೇ ಇಂಥಾ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆಯೂ ಕೊಲೆ ಆರೋಪಿಗಳನ್ನು ಅಪರಾಧ ಕೃತ್ಯ ಮಾಡಿದವರನ್ನು ಪೊಲೀಸರು ಬಂಧಿಸಿದಾಗ ಅವರ ಮೇಲೆ ಒತ್ತಡ ಹಾಕಿ ಆರೋಪಿಗಳನ್ನು ಠಾಣೆಯಿಂದ ಬಿಡಿಸಿಕೊಂಡು ಹೋಗಿದ್ದರು. ಕಾನೂನು ಪಾಲಿಸಿಕೊಂಡು ಜನರಿಗೆ ಮಾದರಿಯಾಗಿಬೇಕಿದ್ದ ಶಾಸಕ ಗೂಂಡಾ ರೀತಿ ವರ್ತನೆ ಮಾಡಿರುವುದು ತಪ್ಪು. ಪ್ರತಿಭಟನಾ ಸಭೆಯಲ್ಲೂ ಪೂಂಜ ಉದ್ರೇಕಕಾರಿ ಭಾಷಣ ಮಾಡಿದ್ದಾರೆ. ಪೊಲೀಸರು ನೋಟಿಸ್ ಕೊಡಲು ಹೋದಾಗಲೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಡಿಜೆ ಹಳ್ಳಿ ಕೆಜಿ ಹಳ್ಳಿ ಥರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಸಂಘಪರಿವಾರ ಮತ್ತು ಬಿಜೆಪಿ ಪ್ರಯೋಜಿತ ಗಲಭೆ ಎಂಬುದು ಪೂಂಜ ಮಾತುಗಳಿಂದ ಬಯಲಾಗಿದೆ. ಹೀಗಾಗಿ ಪೂಂಜ ವಿರುದ್ಧ ಯುಎಪಿಎ ಕಾಯ್ದೆಯಡಿ ಕೇಸ್ ದಾಖಲಿಸಿ ಬಂಧಿಸಬೇಕು, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಬಗ್ಗೆ ಮರುತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ಹರೀಶ್ ಪೂಂಜ ಬೆಳ್ತಂಗಡಿಗೆ ಮಾರಕ ಆಗುತ್ತಿದ್ದಾರೆ. ಅಕ್ರಮ ವ್ಯವಹಾರಗಳಲ್ಲಿ ಪೂಂಜ ಅವರ ಪಾಲು ಇದೆ ಸಂಶಯ ಇದೆ. ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರು ಕೂಡ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮಾಜದಲ್ಲಿ ದ್ವೇಷ ಬಿತ್ತುವ ಶಾಸಕರನ್ನು ಬಂಧಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ ಪ್ರಶ್ನಿಸಿದ್ದಾರೆ.
ಜಾಮೀನುರಹಿತ ಪ್ರಕರಣದಲ್ಲಿ ಪೂಂಜೆ ಅವರನ್ನಹ ಸ್ಟೇಷನ್ ಬೇಲ್ ಕೊಟ್ಟು ಬಿಡುಗಡೆ ಮಾಡಿದ್ದು ಏಕೆ ಎಂದು ಸರ್ಕಾರ ಹೇಳಬೇಕು. ಶಾಸಕರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಬೇರೆ ಕಾನೂನುಗಳು ಇದೆಯಾ?ಮುಸ್ಲಿಮರು ಪ್ರತಿಭಟನೆ ಮಾಡಿದಾಗ ಲಾಠಿ ಚಾರ್ಜ್ ಮಾಡಿ ತಲೆ ಒಡೆಯುವ ಪೊಲೀಸರು, ಹರೀಶ್ ಪೂಂಜ ಮತ್ತು ಬೆಂಬಲಿಗರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ?ಪೂಂಜ ಅವರನ್ನು ರಕ್ಷಣೆ ಮಾಡುತ್ತಿರುವ ಕಾಣದ ಕೈಗಳು ಯಾವುದು? ಕರ್ನಾಟಕದಲ್ಲಿರೋದು ಕಾಂಗ್ರೆಸ್ ಸರ್ಕರವಾ ಅಥವಾ ಬಿಜೆಪಿ ಸರ್ಕರವಾ ಎಂಬ ಸಂಶಯ ಬರ್ತಿದೆ ಎಂದರು.
ಪುನರಾವರ್ತಿತ ಅಪರಾಧ ಮಾಡುವ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಅಟ್ಟಬೇಕಿತ್ತು. ಹರೀಶ್ ಪೂಂಜ ಪ್ರತ್ಯೇಕ ರಿಪಬ್ಲಿಕ್ ಆಫ್ ಬೆಳ್ತಂಗಡಿ ಮಾಡಿಟ್ಟಿದ್ದಾರೆ. ಹರೀಶ್ ಪೂಂಜ ಒಬ್ಬ ಅವಿವೇಕಿ, ಅಪ್ರಬುದ್ಧ ಶಾಸಕ, ಅವರನ್ನು ಬಂಧಿಸಬೇಕು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಶಾಸಕರು ಇದೇ ರೀತಿ ಮುಂದುವರಿದರೆ ಜಿಲ್ಲೆಯ ಕಾನೂನು ಸ್ಥಿತಿ ಹದಗೆಡಬಹುದು. ಸರ್ಕಾರ ಇಂಥವರನ್ನು ಹೆಡೆಮುರಿ ಕಟ್ಟಬೇಕು. ಸರ್ಕಾರ ಬ್ಯಾಲೆನ್ಸ್ ಮಾಡಬಾರದು, ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು, ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಸರ್ಕಾರ ಮಾಡಬಾರದು ಎಂದರು.